ಹತ್ತಾರು ವರ್ಷಗಳ ಸಮಸ್ಯೆಗೆ ಬಿತ್ತು ಬ್ರೇಕ್
ಕ.ಪ್ರ.ವಾರ್ತೆ ತುಮಕೂರು ಜೂ.3
ಮಳೆ ಬಂದರೆ ತುಮಕೂರಿನ ಭದ್ರಮ್ಮ ಛತ್ರದ ಬಳಿ 1 ಅಡಿ ನಿಲ್ಲುತ್ತಿದ್ದ ನೀರಿಗೆ ಕಡೆಗೂ ಮುಕ್ತಿ ಸಿಕ್ಕಂತಾಗಿದೆ.
ಮಳೆ ಬಂದ ಕೂಡಲೇ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹರಿದು ಬರುತ್ತಿದ್ದ ನೀರು ಭದ್ರಮ್ಮ ಛತ್ರದ ಬಳಿ ಮುಂದೆ ಹರಿಯದೆ ನಿಲ್ಲುತ್ತಿತ್ತು. ಇದರಿಂದ ವಾಹನ ಸವಾರರು ಪರದಾಡುತ್ತಿದ್ದರು. ಅಲ್ಲದೇ ಹಲವಾರು ಅಪಘಾತಗಳು ಮಾಮೂಲಾಗಿದ್ದವು.
ಈ ಸಮಸ್ಯೆ ನಿವಾರಣೆ ಮಾಡಲು ನಗರಸಭೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿರಲಿಲ್ಲ. ತುಮಕೂರು ನೂತನ ಶಾಸಕ ರಫೀಕ್ ಅಹಮದ್ ಅವರು ಈ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಸರ್ಕಲ್ ಬಳಿ ಗುಂಡಿ ಅಗೆದು ಅಲ್ಲಿ ಹೊಸ ಹೊಸ ಪೈಪ್ಗಳನ್ನು ಜೋಡಿಸಲಾಗಿದೆ. ಹೀಗಾಗಿ ಜೂನಿಯರ್ ಕಾಲೇಜು ಮೈದಾನದಿಂದ ಹರಿದು ಬರುವ ನೀರು ಈ ಪೈಪ್ ಮೂಲಕ ಸರಾಗವಾಗಿ ಹರಿದು ಹೋಗಲಿದೆ.
ಮೊನ್ನೆ ಬಿದ್ದ ಬಾರಿ ಮಳೆಯಿಂದಾಗಿ ರಸ್ತೆ ತುಂಬಾ ನೀರು ತುಂಬಿಕೊಂಡಿತ್ತು. ವಾಹನ ಸವಾರರು ಬಿದ್ದದ್ದೂ ಉಂಟು. ಜತೆಗೆ ಪಾದಚಾರಿಗಳಿಗೆ ಈ ಜಾಗದಲ್ಲಿ ಓಡಾಡಲು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಕಾಮಗಾರಿಗೆ ಕಡೆಗೂ ಚಾಲನೆ ಸಿಕ್ಕಿದೆ.
ಈಗಾಗಲೇ ಈ ಕಾಮಗಾರಿ ಭರದಿಂದ ಸಾಗಿದೆ. ತ್ವರಿತಗತಿಯಲ್ಲಿ ಈ ಕಾಮಗಾರಿ ಮುಗಿಸಲು ದಿನವಿಡಿ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ಭದ್ರಮ್ಮ ಛತ್ರದಿಂದ ಸೋಮೇಶ್ವರಪುರಂ ಮುಖ್ಯ ರಸ್ತೆಯವರೆಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಭಾರಿ ಗಾತ್ರಿದ ಪೈಪ್: ಈಗಾಗಲೇ ಕ್ರೇನ್ನಿಂದ ಭಾರಿ ಗಾತ್ರದ ಪೈಪ್ಗಳನ್ನು ಇಡಲಾಗಿದೆ. ಇನ್ನು ಒಂದೆರೆಡು ದಿವಸದಲ್ಲಿ ಈ ಕಾಮಗಾರಿ ಮುಗಿಯಲಿದೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು ಯಾವ ತೊಂದರೆಯೂ ಆಗದಂತೆ ಕಾಮಗಾರಿ ಮುಗಿಸಲಾಗುವುದು ಎನ್ನುತ್ತಾರೆ ತುಮಕೂರು ಶಾಸಕ ಡಾ. ರಫೀಕ್ ಅಹಮದ್.
ಇದೇ ಅಲ್ಲದೇ ಬೇರೆ ಬೇರೆ ಭಾಗಗಳಲ್ಲೂ ಮಳೆ ನೀರು ನಿಲ್ಲುವ ಜಾಗಗಳನ್ನು ಪತ್ತೆ ಮಾಡಿ ಅದರ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಆದಷ್ಟು ಬೇಗ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿದೆ. ಮಳೆಗಾಲ ಹೆಚ್ಚಾಗುವುದರೊಳಗೆ ಈ ಕಾಮಗಾರಿ ಸಂಪೂರ್ಣವಾಗಿ ಮುಗಿಯಲಿದೆ.
5 ಲಕ್ಷದ ಕಾಮಗಾರಿ: ಈ ಕಾಮಗಾರಿಗೆ ಅಂದಾಜು 5 ಲಕ್ಷ ರು. ವೆಚ್ಚವಾಗಲಿದೆ. ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು ಇನ್ನು ಒಂದರೆಡು ದಿವಸಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲಿದೆ. ಅಲ್ಲದೇ ಸೋಮೇಶ್ವರಪುರಂ ಮುಖ್ಯ ರಸ್ತೆಯ ಸಂಚಾರ ನಿರ್ಬಂಧಿಸಿರುವುದರಿಂದ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪೂರೈಸಲು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.