ತಕ್ಷಣ ಚೆಕ್ ಡ್ಯಾಂ ತೆರವುಗೊಳಿಸಿ
ಕ.ಪ್ರ. ವಾರ್ತೆ ತುಮಕೂರು ಜೂ. 4
ಮರಳೂರು ಅಮಾನಿಕೆರೆಗೆ ಬರುವ ನೀರನ್ನು ತಡೆಗಟ್ಟುವ ಚೆಕ್ ಡ್ಯಾಂ ತೆರವುಗೊಳಿಸಬೇಕೆಂದು ಆ ಭಾಗದವರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತುಮಕೂರು ತಾಲೂಕು ಕಸಬಾ ಹೋಬಳಿ ಮರಳೂರು ಅಮಾನಿಕೆರೆಗೆ ಊರ್ಡಿಗೆರೆ ಹೋಬಳಿ ಮೈದಾಳ, ಕೆಸರಮಡು, ದೇವರಹೊಸಹಳ್ಳಿ ಉತ್ತರಕಟ್ಟೆ ಇತರೆ ಕಡೆಗಳಿಂದ ಬರುತ್ತಿದ್ದು ಸದರಿ ನೀರಿ ಮೂಲವನ್ನು ಪಾಲಸಂದ್ರಕ್ಕೆ ಹೋಗುವ ರಸ್ತೆಯಲ್ಲಿ ಚೆಕ್ ಡ್ಯಾಂ ಕಟ್ಟಿದ್ದಾರೆ.
ಇದರಿಂದ ಮರಳೂರು ಅಮಾನಿಕೆರೆಗೆ ಬರುವ ನೀರನ್ನು ತಡೆದು ಚೆಕ್ ಡ್ಯಾಂ ಮೂಲಕ ಗೂಳೂರು ಕೆರೆಗೆ ಹರಿಯುವಂತೆ ಮಾಡಲಾಗಿದೆ. ಇದರಿಂದ ಮರಳೂರು ಅಮಾನಿಕೆರೆಗೆ ಬರುವ ನೀರು ಗೂಳೂರು ಕೆರೆಗೆ ಹರಿಯುವಂತೆ 12 ಅಡಿ ಅಗಲ ಮತ್ತು 3 ಅಡಿ ಆಳ ತೆಗದಿರುವುದರಿಂದ ಯಾವುದೇ ನೀರು ಮರಳೂರು ಅಮಾನಿಕೆರೆಗೆ ಬರುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಗಾಲುವೆಗೆ ಅಡ್ಡಲಾಗಿ ರಸ್ತೆಯನ್ನು ನಿರ್ಮಿಸಿ ತಡೆಯನ್ನು ಉಂಟು ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತುರ್ತಾಗಿ ತೆರವುಗೊಳಿಸುವಂತೆ ಕೋರಿಕೊಂಡಿದ್ದೆವು.
ಆದರೆ ಇದುವರೆಗೂ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ. ಮರಳೂರು ಅಮಾನಿಕೆರೆಗೆ ನೀರು ಇಲ್ಲದಂತಾಗಿ ಈ ಭಾಗದ ಕೊಳವೆ ಬಾವಿಗಳಲ್ಲಿ ಜಲ ಬತ್ತಿ ಹೋಗಿದ್ದು ಜನ ಜಾನುವಾರುಗಳಿಗೆ, ಕೃಷಿಗೆ ನೀರು ಇಲ್ಲದಂತಾಗಿದೆ. ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಇತ್ಯಾದಿ ಒಣಗಿ ಹೋಗಿ ನಷ್ಟ ಉಂಟಾಗಿದೆ ಎಂದು ದೂರಿದ್ದಾರೆ.
ತುರ್ತು ಕ್ಮಮ ಅಗತ್ಯ: ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಂಡು ತುಮಕೂರು ತಾಲೂಕು ಮರಳೂರು ಅಮಾನಿಕೆರೆಗೆ ಹರಿಯುವ ನೀರಿನ ಮೂಲ ತಡೆದಿರುವುದನ್ನು ತೆರವುಗೊಳಿಸಿ ಮರಳೂರು ಅಮಾನಿಕೆರೆ ಸುತ್ತಮುತ್ತಲ ನೀರಿನ ಅಭಾವ ನೀಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಒಂದು ವೇಳೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಉದಾಸೀನ ಮಾಡಿದಲ್ಲಿ ಈ ವ್ಯಾಪ್ತಿಯ ರೈತರು, ಸಾರ್ವಜನಿಕರು ಉಗ್ರವಾದ ಹೋರಾಟ ಮಾಡಲು ಸಿದ್ಧರಿರುವುದಾಗಿ ಎಚ್ಚರಿಸಿದ್ದಾರೆ. ಇದರಿಂದ ಆಗುವ ಎಲ್ಲಾ ಆಗು ಹೋಗುಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಗಾರರಾಗುತ್ತಾರೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ನಾಗರಾಜು, ಅಶೋಕಕುಮಾರ್, ಕೃಷ್ಣಪ್ಪ, ರಾಜಣ್ಣ, ಹನುಮಂತರಾಯಪ್ಪ, ಬಿ. ರಾಮಯ್ಯ, ಗಂಗರಾಜು ಮುಂತಾದವರು ಹಾಜರಿದ್ದರು. ಈ ವೇಳೆ ಚೆಕ್ ಡ್ಯಾಂ ಅನ್ನು ಪರಿಶೀಲಿಸಿದರು.