ಪರಮೇಶ್ವರ್ ಸೋಲಿಗೆ ಷಫಿ ನೇರ ಹೊಣೆ'
ತುಮಕೂರು: ಕೊರಟಗೆರೆ ಕ್ಷೇತ್ರದ ಅಭ್ಯರ್ಥಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸೋಲಿಗೆ ಜಿಲ್ಲಾ ಕಾಂಗ್ರೆಸ್ ನೇರ ಹೊಣೆಯಾಗಿದ್ದು, ಜಿಲ್ಲಾಧ್ಯಕ್ಷ ಎಸ್. ಷಫಿ ಅಹಮದ್ ರಾಜಿನಾಮೆಗೆ ಕುಣಿಗಲ್ ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಸಿ.ಎನ್. ರವಿಕಿರಣ್ ಆಗ್ರಹಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಒಗ್ಗಟ್ಟಿನಿಂದ ಶ್ರಮಿಸಿದ್ದರೆ, ಪರಮೇಶ್ವರ್ ಸೋಲಲು ಸಾಧ್ಯವೇ ಇರುತ್ತಿರಲಿಲ್ಲ. ಆದರೆ ಪಕ್ಷ ಒಡೆದ ಮನೆಯಾಗಿದ್ದು, ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ತಪ್ಪಿ ಹೋಯಿತು ಎಂದು ವಿಷಾದಿಸಿದರು.
ರಾಜ್ಯದೆಲ್ಲೆಡೆ ಸುತ್ತಿ, ಪ್ರಚಾರ ಮಾಡಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಪರಮೇಶ್ವರ್ ಪರ ಜಿಲ್ಲಾ ಕಾಂಗ್ರೆಸ್ ಶ್ರಮಿಸುವುದಿರಲಿ, ಪ್ರಯತ್ನ ಕೂಡ ಮಾಡಲಿಲ್ಲ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಸ್ಥಾನ ಒಲಿದು ಬರಲಿದೆ ಎಂಬ ಅಲೆ ಸೃಷ್ಟಿಸಿದ್ದರೂ ಸಾಕಿತ್ತು. ಒಮ್ಮೆಯೂ ಒಗ್ಗೂಡಿ ಪ್ರಚಾರ ಮಾಡಲಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ಸೆಳೆಯುವಷ್ಟು ವರ್ಚಸ್ಸು ಕೂಡ ಷಫಿ ಅಹಮದ್ ಅವರಿಗಿಲ್ಲ ಎಂದು ಹರಿಹಾಯ್ದರು.
ಮೊದಲೇ ರಾಜಿನಾಮೆ: ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದೆ. ಆದರೂ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಬಿ. ರಾಮಸ್ವಾಮಿಗೌಡ ಅವರ ಸೋಲಿಗೆ ತಾವೇ ಕಾರಣ ಎಂಬ ನೆಪವೊಡ್ಡಿ ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಹಾಸ್ಯಾಸ್ಪದ ಎಂದರು.
ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದ್ದರೆ 100 ಕ್ಕೆ 100 ರಷ್ಟು ಗೆಲ್ಲುತ್ತಿದ್ದೆ. ಆದರೆ ಕೊನೆ ಕ್ಷಣದವರೆಗೂ ಟಿಕೆಟ್ ನೀಡುವ ಭರವಸೆ ನೀಡಿ ವಂಚಿಸಲಾಯಿತು. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಸೇರುವ ಯೋಚನೆಯಿಲ್ಲ: ಜೆಡಿಎಸ್ ಅಥವಾ ಬೇರೇ ಪಕ್ಷ ಸೇರುವ ಆಲೋಚನೆಯಿಲ್ಲ. ಯಾವುದೇ ಪಕ್ಷ ಸೇರಿ ಲೋಕಸಭೆಗೆ ಸ್ಪರ್ಧಿಸುವ ಇರಾದೆ ತಮಗಿಲ್ಲ. ತಮ್ಮ ತಾಯಿ, ಕುಟುಂಬ ವರ್ಗ, ಅಭಿಮಾನಿಗಳು, ಕಾರ್ಯಕರ್ತರ ತೀರ್ಮಾನದಂತೆ ರಾಜಕೀಯದಲ್ಲಿ ಮುಂದಡಿ ಇಡುವುದಾಗಿ ರವಿಕಿರಣ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜಕೀಯ ಅನಿವಾರ್ಯ ಅಲ್ಲ: ರಾಜಕೀಯ ಅನಿವಾರ್ಯ ಅಲ್ಲ. ತಮ್ಮ ತಂದೆ ಬಿಬಿಎಂಪಿ ಮಾಜಿ ಮೇಯರ್ ಸಿ.ಎಂ. ನಾಗರಾಜ್. ಕಡೆವರೆಗೂ ಕಾಂಗ್ರೆಸ್ ಪಕ್ಷಕ್ಕೆ ಸಮರ್ಪಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷ ತಮ್ಮನ್ನು ಗುರುತಿಸಿ ಮತ್ತೆ ಕರೆದರೆ ಪಕ್ಷಕ್ಕೆ ಮರಳಲಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.