ಬಿಸಿ ಊಟದಲ್ಲಿ ಹಲ್ಲಿ ಬಿದ್ದು ಶಾಲಾ ಮಕ್ಕಳು ಅಸ್ವಸ್ಥ
ಗುಬ್ಬಿ: ಮಧ್ಯಾಹ್ನದ ಬಿಸಿ ಊಟದಲ್ಲಿ ಹಲ್ಲಿ ಬಿದ್ದ ಪರಿಣಾಮ ಊಟ ಸೇವಿಸಿದ ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಬಂಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಶಾಲೆಯಲ್ಲಿ ಊಟ ಬಡಿಸುವಾಗ 7 ನೇ ತರಗತಿಯ ವಿದ್ಯಾರ್ಥಿ ತೇಜಸ್ವಿನಿಗೆ ಸಾಂಬಾರಿನಲ್ಲಿ ಹಲ್ಲಿ ಸಿಕ್ಕಿದೆ. ಈ ಸಮಯದಲ್ಲಿ ಯಾರೂ ಊಟ ಮಾಡದಹಾಗೆ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ತಿಳಿಸಿದಾಗ ಮಕ್ಕಳು ಊಟ ಮಾಡುವುದನ್ನು ನಿಲ್ಲಿಸಿದರು. ನಿಟ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಪವಿತ್ರ ತಮ್ಮ ಸಿಬ್ಬಂದಿಯೊಂದಿಗೆ ಶಾಲೆಗೆ ಭೇಟಿ ನೀಡಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಶಾಲಾ ಮಕ್ಕಳಿಗೆ ಔಷಧಿ ನೀಡಿ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.