ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಳೆ ಬಂತು ಮಳೆ...ರೈತನ ಮೊಗದಲ್ಲಿ ನಗು ತಂತು

Rashmi Kasaragodu
Updated On : 5 Jun 2013, 12:11 pm

ತುರುವೇಕೆರೆ: ಅಂತೂ ವರುಣ ದೇವ ಕರುಣೆ ತೋರಿದ. ಕಳೆದ ಐದಾರು ದಿನಗಳಿಂದ ಅಷ್ಟೋ ಇಷ್ಟೋ ಮಳೆ ಬರುತ್ತಿದೆ. ನೀರಿಗಾಗಿ ಹಪಹಪಿಸುತ್ತಿದ್ದ ಭೂಮಿ ತಾಯಿ ಮಳೆ ನೀರಿನಿಂದ ತಣಿದಿದ್ದಾಳೆ. ಈಗಾಗಲೇ ತಾಲೂಕಿನಲ್ಲಿ ಮಳೆಯಿಲ್ಲದೆ ಸುಳಿಯೇ ಹೋಗಿ ಜೀವ ತೆತ್ತಿರುವ ಸಾವಿರಾರು ತೆಂಗು ಹಾಗೂ ಅಡಕೆ ಮರಗಳ ಮಧ್ಯೆ ಇಂದೋ ನಾಳೆಯೋ ಜೀವ ಬಿಡುತ್ತಿದ್ದ ತೆಂಗು ಹಾಗೂ ಅಡಕೆಗೆ ಜೀವ ಜಲ ಸಿಕ್ಕಿದೆ. ಇವುಗಳೆಲ್ಲದರ ಮಧ್ಯೆ ಬದುಕಿದೆಯೇ ಬಡ ಜೀವವೇ ಎಂಬಂತೆ ರೈತರ ಮುಖದಲ್ಲಿ ನಗು ಮೂಡಿದೆ.
ತಾಲೂಕಿನ ಹಲವಾರು ಕೆರೆ ಕಟ್ಟೆಗಳು ನೀರಿಲ್ಲದೆ ಒಣಗಿ ಹೋಗಿ ಅದೆಷ್ಟೊ ತಿಂಗಳಾಗಿವೆ. ಅಂತರ್ಜಲವೂ ಕುಸಿತಗೊಂಡ ಪರಿಣಾಮ ಗಿಡ ಮರಗಳು ನೀರಿನ ಸೆಳವಿಲ್ಲದೇ ಸೊರಗಿ ಹೋಗಿವೆ. ಬೆಳೆಗಳು ಸಹ ನಿರೀಕ್ಷಿಸದಷ್ಟು ಲಭಿಸುತ್ತಿರಲಿಲ್ಲ. ಬಿತ್ತಿದ್ದ ಬೀಜಗಳು ಮೊಳಕೆಯೊಡೆಯಲೂ ಆಗದೇ ಭೂಮಿಯಲ್ಲೇ ಚಿವುಟಿ ಹೋಗಿದ್ದವು.
ಬೋರ್‌ವೆಲ್‌ಗಳು ನೀರಿಲ್ಲದೆ ಒಣಗಿ ಹೋಗಿದ್ದವು. ತಾಲ್ಲೂಕಿನ ಅದೆಷ್ಟೋ ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ಸ್ಥಬ್ದವಾಗಿದೆ. ಕನಿಷ್ಠ ಬೆಳೆಗೆ ನೀರಿಲ್ಲದೇ ಇದ್ದ ಸಂದರ್ಭದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಬಂದೊದಗಿತ್ತು. ದನಕರುಗಳಿಗೆ ನೀರು ಹಾಗೂ ಮೇವು ಒದಗಿಸಲು ಸಾಧ್ಯವಾಗದೇ ಜಾನುವಾರುಗಳನ್ನು ಆರಕ್ಕೆ ಮೂರರಂತೆ ಮಾರಿ ಕೈ ತೊಳೆದು ಕೊಳ್ಳುತ್ತಿದ್ದರು.
 ಇಂತಹ ಸಂದಿಗ್ಧ ಸ್ಥಿತಿಯಲ್ಲಿ ರೈತರ ಗೋಳು ಹೇಳತೀರದಾಗಿತ್ತು.
ಸದ್ಯಕ್ಕೆ ಪಾರು: ಬೆಳೆದ ತರಕಾರಿ ಕೈಗೆ ಸಿಗದೇ ಇದ್ದುದರಿಂದ ಸಿಕ್ಕ ಬೆಳೆಯೇ ಇವರಿಗೆ ಜೀವನೋಪಾಯದ ಆದಾಯವಾಗಿತ್ತು. ಸಿಕ್ಕ ತರಕಾರಿಗೆ ಹೆಚ್ಚು ಬೆಲೆ. ಕೊಳ್ಳಲು ಗ್ರಾಹಕರಿಗೆ ಕಷ್ಟ ಸಾಧ್ಯ.  ಇಂತಹ ದುಃಸ್ಥಿತಿಯಲ್ಲಿದ್ದ ರೈತರು ಜಾನುವಾರುಗಳು ಹಾಗೂ ಸಾರ್ವಜನಿಕರನ್ನು ವರುಣ ದೇವ ಕೃಪೆ ತೋರಿ ಸದ್ಯಕ್ಕೆ ಜೀವ ಉಳಿಸಿದ್ದಾನೆ. ಕಳೆದ ಐದಾರು ದಿನಗಳಿಂದ ಮಳೆರಾಯ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದಾನೆ. ರೈತರ ತೋಟ, ಹೊಲ ಹಾಗೂ  ಗದ್ದೆಗಳಲ್ಲಿ ತಂಪೆರದಿದ್ದಾನೆ. ಕಳೆದ ಬಾರಿ ಬಿತ್ತಿದ್ದ ಹೆಸರು ಹೇಳ ಹೆಸರಿಲ್ಲದಂತಾಗಿತ್ತು. ಆದರೆ ಈ ಬಾರಿಯ ಮುಂಗಾರು ಮಳೆಯಲ್ಲಿ  ಬಿತ್ತಿರುವ ಹೆಸರು, ತೊಗರಿ, ಉದ್ದು, ಎಳ್ಳು, ಜೋಳ, ಅಲಸಂಡೆ ಮೊಳಕೆಯೊಡೆದಿದೆ. ಮುಂಬರುವ ದಿನಗಳಲ್ಲಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.  ವರುಣನಿಗಾಗಿ ಕಾದು ಕುಳಿತಿದ್ದ ರೈತರು ಈಗ ನೇಗಿಲು ಹಿಡಿದು ತಮ್ಮ ಭೂಮಿಯತ್ತ ತೆರಳುತ್ತಿದ್ದಾರೆ. ರೈತರ ಮೊಗದಲ್ಲಿ ಮಂದಹಾಸ ಬೀರಲು ಕಾರಣನಾಗಿರುವ ವರುಣ ದೇವನಿಗೆ ಉಗೇ ಉಗೇ ಅನ್ನುತ್ತಿದ್ದಾರೆ. ವರುಣ ದೇವ ತಮ್ಮನ್ನು, ಜನ ಜಾನುವಾರುಗಳನ್ನು ಹರಸು ತಂದೆ ಎಂದು ಕಂಡ ಕಂಡ ದೇವರಲ್ಲಿ ಮೊರೆ ಇಡುತ್ತಿದ್ದಾರೆ. ಈ ಬಾರಿ ವರುಣ ದೇವ ಕರುಣೆ ತೋರಿದರೆ ರೈತರ ಬಾಳು ಹಸನವಾದೀತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement