ರಾಯಚೂರು ಪೌರಕಾರ್ಮಿಕರ ಪರ ತುಮಕೂರು ಪೌರಕಾರ್ಮಿಕರ ಪ್ರತಿಭಟನೆ
ಕ.ಪ್ರ. ವಾರ್ತ್ಣೆ ತುಮಕೂರ್ಣು ಜೂ.4
ರಾಯಚೂರು ಪೌರಕಾರ್ಮಿಕರಿಗೆ ನೀಡಬೇಕಾದ 6 ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ, ರಾಯಚೂರು ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತುಮಕೂರು ಜಿಲ್ಲಾ ಪೌರ ಕಾರ್ಮಿಕರ ಸಂಘ ಸಿಐಟಿಯು ನಗರದ ಟೌನ್‌ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ರಾಜ್ಯದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಕಳೆದ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದು ಅವರಿಗೆ ತಿಂಗಳಿಗೆ ಸರಿಯಾಗಿ ವೇತನ ಸಿಗದೆ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಮಾಡಿದ ಕೆಲಸಗಳಿಗೆ ವೇತನ ಕೊಡಿಸುವಂತೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪೌರಕಾರ್ಮಿಕರಿಗೆ ವೇತನ ಕೊಡಿಸುವಂತೆ ಒತ್ತಾಯಿಸಿದಾಗ ರಾಯಚೂರಿನ ಜಿಲ್ಲಾಧಿಕಾರಿಗಳು ಕಾರ್ಮಿಕರ ಅಹವಾಲನ್ನು ಕೇಳಿಸಿಕೊಳ್ಳದೆ ಅಮಾನುಷವಾಗಿ ವರ್ತಿಸಿರುವ ಕ್ರಮ ಸರಿಯಾದುದಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸರ್ಕಾರ ಕೂಡಲೇ ಪೌರಕಾರ್ಮಿಕರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ಗುತ್ತಿಗೆ ಕಾರ್ಮಿಕ ಪದ್ದತಿ ರದ್ದತಿಗೆ ಆಗ್ರಹ: ರಾಜ್ಯ ಸರ್ಕಾರ ಈ ಸಮಸ್ಯೆಗಳನ್ನು ಬಗೆಹರಿಸಲು ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧಿಸಿ ಕಾರ್ಮಿಕರನ್ನು ಕಾಯಂಗೊಳಿಸಬೇಕು ಅಲ್ಲಿಯವರೆಗೂ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು. ಆಗ ಮಾತ್ರ ದಲಿತ ಪೌರ ಕಾರ್ಮಿಕರಿಗೆ ಸಾಮಾಜಿಕ ನ್ಯಾಯ ದೊರಕುತ್ತದೆ ಎಂದು ಆಭಿಪ್ರಾಯಪಟ್ಟರು. ಪೌರಕಾರ್ಮಿಕರ ಸಂಘದ ರಾಜ್ಯ ಖಜಾಂಚಿ ಸಿ.ವೆಂಕಟೇಶ್ ಮಾತನಾಡಿ ನಗರ ಸ್ವಚ್ಛತೆಗಾಗಿ ದುಡಿಯುವ ಕಾರ್ಮಿಕರನ್ನು ಅಧಿಕಾರಿಗಳು ಮತ್ತು ಸರ್ಕಾರಗಳು ಅಸ್ಪ್ರಶ್ಯರಂತೆ ಕಾಣುತ್ತಿದ್ದು ಇದನ್ನು ತೊರೆದು ಮನುಷ್ಯರಂತೆ ಕಾಣಬೇಕು ಎಂದರು. ಪ್ರತಿಭಟನೆಯಲ್ಲಿ ಜಿಲ್ಲಾ ಖಜಾಂಚಿ ಮಂಜುನಾಥ್, ನರಸಿಂಹರಾಜು, ನರಸಿಂಹಮೂರ್ತಿ, ರಾಜು , ಉಮೇಶ್, ಶಾಂತಮ್ಮ, ರವಿ ಮುಂತಾದವರು ನೇತೃತ್ವ ವಹಿಸಿದ್ದರು.