ಆಟೋ ಚಾಲಕನ ಮಗನಿಗೆ ರಾಷ್ಟ್ರ ಪ್ರಶಸ್ತಿ
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಸ್ಎಸ್ಎಲ್ಸಿಯಲ್ಲಿ ತಾಲೂಕಿಗೇ ಪ್ರಥಮ ಸ್ಥಾನ ಪಡೆದ ಆಟೋ ಚಾಲಕನ ಮಗ ಆರ್. ಮಧುಸೂದನ್ಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ನವದೆಹಲಿಯ ಕಾಮನ್ವೆಲ್ತ್ ಪಾರ್ಲಿಮೆಂಟ್ ಅಸೋಸಿಯೇಷನ್ ವತಿಯಿಂದ 2011-12 ಸಾಲಿನಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪಾರ್ಲಿಮೆಂಟರಿ ಅಸೋಸಿಯೇಷನ್ ನಡೆಸಿದ 'ಡೆಮಾಕ್ರೆಸಿ ಗೇಟ್ ವೇ ಟು ಗುಡ್ ಗೌರ್ವನನ್ಸ್' ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 17 ರಂದು 12 ಗಂಟೆಗೆ ನವದೆಹಲಿಯ ಪಾರ್ಲಿಮೆಂಟರಿ ಲೈಬ್ರರಿ ಬಾಲಯೋಗಿ ಆಡಿಟೋರಿಯಂನಲ್ಲಿ ನಡೆಯಲಿದ್ದು, ಲೋಕಸಭಾ ಸ್ಪೀಕರ್ ಮೀರಾಕುಮಾರ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಯಾದ ಪ್ರಶಸ್ತಿ ವಿಜೇತ ಆರ್. ಮಧುಸೂಧನ್ಗೆ ದೆಹಲಿಯ ಪಾರ್ಲಿಮೆಂಟ್ನಲ್ಲಿ ಮೂರು ದಿನಗಳ ಕಾಲ ತಂಗಲು ವ್ಯವಸ್ಥೆ ಮಾಡಲಾಗಿದೆ.
ಇತ್ತೀಚೆಗೆ 10ನೇ ತರಗತಿಯಲ್ಲಿ ವಿಲೀನ ವಿಭಾಗದಲ್ಲಿ ಶೇ.95ರಷ್ಟು ಅಂಕ ಗಳಿಸಿ ಈತ ತಾಲೂಕಿಗೇ ಪ್ರಥಮ ಸ್ಥಾನ ಗಳಿಸಿದ್ದಾನೆ. ಚಿಕ್ಕನಾಯಕನಹಳ್ಳಿಯಲ್ಲಿ ಆಟೋ ಚಾಲಕರಾಗಿರುವ ತಂದೆ ಸಿ.ಎನ್. ರವಿಕುಮಾರ್, ತಾಯಿ ಸರಸ್ವತಿ ಅವರಿಗೆ ಮಗನ ಸಾಧನೆ ಸಂತಸ ಮೂಡಿಸಿದೆ. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಉತ್ತೇಜನದೊಂಂದಿಗೆ ವಿದ್ಯಾರ್ಥಿಯ ಪ್ರತಿಭಾ ಕೌಶಲ್ಯಕ್ಕೆ ಇಂಥ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಕೀರ್ತಿ ತಂದಿದೆ.