ಆರೋಗ್ಯ ಇಲಾಖೆಯಿಂದ ಚಾಲನಾ ಸಮಿತಿ ಸಭೆ
ಕ.ಪ್ರ. ವಾರ್ತೆ , ಕೊರಟಗೆರೆ , ಜೂ.5
ತಾಲೂಕಿನ ಕೆಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಘೀ ಜ್ವರ ಪ್ರಕರಣ ವರದಿಯಾಗಿದ್ದು ಅದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ವಹಿಸಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲಾ ಗ್ರಾ.ಪಂ. ಅಧಿಕಾರಿಗಳು ಓವರ್ ಹೆಡ್ ಟ್ಯಾಂಕ್ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಕಡ್ಡಾಯವಾಗಿ ಫಾಗಿಂಗ್ ಮಾಡಿಸುವಂತೆ ತಾಲೂಕು ವೈದ್ಯಾಧಿಕಾರಿ ವರದಿಯ ಮೇರೆಗೆ ತಹಸೀಲ್ದಾರ್ ರಾಮಚಂದ್ರಪ್ಪ ಸೂಚಿಸಿದರು.
ಅವರು ಪಟ್ಟಣದ ಮಿನಿ ವಿಧಾನಸೌಧದ ಕಚೇರಿಯಲ್ಲಿ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಚಾಲನಾ ಸಮಿತಿ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ದಾಸ್ ಅವರ ವರದಿ ಮೇರೆಗೆ ಮಾತನಾಡಿ ತಾಲೂಕಿನಲ್ಲಿ ಈಗಾಗಲೆ 7 ಚಿಕೂನ್ಗುನ್ಯಾ ಮತ್ತು 4 ಡೆಂಢೀ ಜ್ವರ ಪ್ರಕರಣಗಳು ವರದಿಯಾಗಿದ್ದು ರೋಗಗಳನ್ನು ತಡೆಗಟ್ಟಲು ಕುಡಿಯುವ ನೀರಿನ ಸರಬರಾಜು ಮಾಡುವ ವಾಲ್ಗಳು ಸೋರಿಕೆಯಾಗುತ್ತಿರುವುದನ್ನು ತಡೆಯುವ ಕ್ರಮ ಕೈಗೊಂಡು ಅದರೊಂದಿಗೆ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಅಗತ್ಯ ಇರುವೆಡೆ ತುರ್ತು ಕಾಮಗಾರಿ ಕೈಗೊಳ್ಳಬೇಕೆಂದು ತಿಳಿಸಿದರು.
ನಿರ್ದಾಕ್ಷಣ್ಯ ಕ್ರಮ: ತಾಲೂಕು ಪಂಚಾಯತಿ ಇಓ ಎಂ.ಎ. ಗೋಪಾಲ್ ಮಾತನಾಡಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಗ್ರಾಮ ಪಂಚಾಯಿತಿಯವರು ಆರೋಗ್ಯ ಇಲಾಖೆಯವರ ಸಲಹೆ ಸಹಕಾರ ಪಡೆಯುವಂತೆ ಹಾಗೂ ಸ್ವಚ್ಛತೆಯ ಬಗ್ಗೆ ಅಸಡ್ಡೆ ವಹಿಸುವವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುತ್ತೆ ಮತ್ತು ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ದೂರಿದಾಗ ಕೂಡಲೇ ಸ್ಪಂದಿಸಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಮೋಹನ್ದಾಸ್ ಮಾತನಾಡಿ ಡೆಂಘೀ ಮತ್ತು ಚಿಕೂನ್ಗುನ್ಯಾ ಹೇಗೆ ಹರಡುತ್ತದೆ, ಅದರ ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ
ಒಟ್ಟು 7 ಚಿಕೂನ್ ಗುನ್ಯಾ ಮತ್ತು 4 ಡೆಂಘೀ ಜ್ವರ ಪ್ರಕರಣಗಳ ವರದಿಯಾಗಿರುವ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ವತಿಯಿಂದ ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಬಗ್ಗೆ ತಿಳಿಸಿದ ಅವರು, ಪರಿಸರ ಸ್ವಚ್ಛತೆಯನ್ನು ಕಾಪಾಡುವುದರಿಂದ ಸಾರ್ವಜನಿಕರು ಸಹ ಈ ಕಾರ್ಯಕ್ರಮದಲ್ಲಿ ಸಹಕರಿಸಬೇಕೆಂದು ಕೋರಿದರು.
ಸಾರ್ವಜನಿಕರು ತಮ್ಮ ಮನೆಯಲ್ಲಿ ಸಂಗ್ರಹಿಸುವ ನೀರಿನ ಡ್ರಮ್ಗಳನ್ನು ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಿ ಒಣಗಿಸಿ ನಂತರ ನೀರನ್ನು ಶೇಖರಣೆ ಮಾಡಿಸಿಕೊಳ್ಳಬೇಕೆಂದು ಸೂಚಿಸಿದರು. ಸೊಳ್ಳೆಗಳ ನಿಯಂತ್ರಣ ಮತ್ತು ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಬತ್ತಿ, ಸೊಳ್ಳೆ ಪರದೆಗಳನ್ನು ಉಪಯೋಗಿಸಲು ಸಾರ್ವಜನಿಕರಿಗೆ ಸೂಚನೆ ನೀಡುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಡೆಂಘೀ ಜ್ವರ ನಿಯಂತ್ರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಸಹಕಾರ ನೀಡುವಂತೆ ತಿಳಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲ ಶಾಲಾ ಕಾಲೇಜುಗಳಲ್ಲಿ ಪ್ರಾರ್ಥನೆಯ ನಂತರ ಡೆಂಘೀ ಮತ್ತು ಚಿಕೂನ್ ಗುನ್ಯಾ ಜ್ವರದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸಬೇಕಾಗಿದೆ ಎಂದರು. ಸಭೆಯಲ್ಲಿ ಡಾ. ರಾಮಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮದ್ಲೇರಪ್ಪ, ಸೇರಿದಂತೆ ಎಲ್ಲಾ ಇಲಾಖಾ ಆಧಿಕಾರಿಗಳು ಉಪಸ್ಥಿತರಿದ್ದರು.