ಕೊಬ್ಬರಿಗೆ ಕನಿಷ್ಠ 2 ಸಾವಿರ ರು. ಬೆಂಬಲ ಬೆಲೆ ನಿಗದಿ ಮಾಡಿ
ತುಮಕೂರು: ಕೊಬ್ಬರಿಗೆ ಕನಿಷ್ಠ 2 ಸಾವಿರ ರು. ಬೆಂಬಲ ಬೆಲೆ ನಿಗದಿ ಮಾಡಿ ನ್ಯಾಪೆಡ್ ಕೇಂದ್ರದ ಮೂಲಕ ಖರೀದಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ರಾಜ್ಯದಲ್ಲಿ ಅತಿ ಹೆಚ್ಚು ತೆಂಗು ಉತ್ಪಾದನೆ ಮಾಡುವ ತುಮಕೂರು ಜಿಲ್ಲೆಯಲ್ಲಿ 1,42,710 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದ್ದು ಕಳೆದ ವರ್ಷದಿಂದ ಸರಿಯಾಗಿ ಮಳೆ ಇಲ್ಲದ ಕಾರಣ ತೀವ್ರ ಬರಗಾಲಕ್ಕೆ ತುತ್ತಾಗಿದೆ. ಅಲ್ಲದೇ ಶೇ. 80 ರಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಶೇ. 10 ರಷ್ಟು ಅಂದರೆ ಸುಮಾರು 25 ಸಾವಿರ ಎಕರೆ ಪ್ರದೇಶಗಳಲ್ಲಿನ 13 ಲಕ್ಷ ತೆಂಗಿನ ಮರಗಳು ಸಂಪೂರ್ಣವಾಗಿ ಒಣಗಿ ಹೋಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶೇ. 35 ರಿಂದ 40 ರಷ್ಟು ಬೆಳೆ ನಷ್ಟವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದ್ದರೂ ಇಲ್ಲಿಯವರೆಗೂ ಸರ್ಕಾರ ಬೆಳೆ ನಷ್ಟ ಮತ್ತು ನಾಶವಾದ ಮರಗಳಿಗೆ ಪರಿಹಾರವನ್ನು ಘೋಷಿಸಿಲ್ಲ. ಅಲ್ಲದೇ ಕಳೆದ 10 ವರ್ಷಗಳ ಹಿಂದೆ ಇದ್ದ ಕೊಬ್ಬರಿಯ ಬೆಲೆ ಈಗಲೂ ಮುಂದುವರಿದಿದೆ. ಇದರಿಂದ ತೆಂಗು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು ಆತ್ಮಹತ್ಯೆ ದಾರಿಯಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.