ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಗರದಲ್ಲಿ ಎಲ್ಲೆಲ್ಲೂ ಪರಿಸರ ಮಾಲಿನ್ಯ

Vishwanath S
Updated On : 6 Jun 2013, 12:29 pm

ಕನ್ನಡಪ್ರಭ ವಾರ್ತೆ ,   ತುಮಕೂರು ,   ಜೂ.5
ಕಡೇ ಪಕ್ಷ ಪರಿಸರ ದಿನವಾದರೂ ತುಮಕೂರನ್ನು ಮಾಲಿನ್ಯಮುಕ್ತ ನಗರವನ್ನಾಗಿ ಇಟ್ಟುಕೊಳ್ಳುವ ಗೋಜಿಗೆ ಹೋಗದ ನಗರಸಭೆ ಎಂದಿನಂತೆ ನಿದ್ದೆಗೆ ಜಾರಿದೆ. ಹೀಗಾಗಿ ಬೆಂಗಳೂರಿನ ಭವಿಷ್ಯದ ಉಪನಗರಿ, ಶೀಘ್ರ ಮಹಾನಗರಪಾಲಿಕೆಯಾಗಲಿರುವ ತುಮಕೂರು ಅಕ್ಷರಶಃ ಕಸದ ಕೊಂಪೆಯಾಗಿದೆ.
ಎಸ್‌ಐಟಿ, ಸೋಮೇಶ್ವರಪುರಂ, ಗೋಕುಲ, ಚಿಕ್ಕಪೇಟೆ, ಗಾಂಧಿನಗರ ಹೀಗೆ ಬಹುತೇಕ ಎಲ್ಲಾ ಬಡಾವಣೆಗಳಲ್ಲೂ ಕಸದ ರಾಶಿ ರಾಶಿಯೇ ಇವೆ. ಈಗಾಗಲೇ ಹಲವಾರು ಬಾರಿ ಕಸ ವಿಲೇವಾರಿಗೆ ಮನವಿ ಮಾಡಿದರೂ ನಗರಸಭೆ ಆಯುಕ್ತರಾಗಲಿ, ಇತರೆ ಅಧಿಕಾರಿಗಳಾಗಲಿ ಇತ್ತ ಗಮನಹರಿಸಿಲ್ಲ. ಹಾಲಿ ನಗರಸಭೆ ಈಗ ಅಸ್ತಿತ್ವದಲ್ಲಿ ಇಲ್ಲ. ಹಾಲಿ ಸದಸ್ಯರು ಆಯ್ಕೆಯಾಗಿದ್ದರೂ ಚುನಾವಣೆ ಮತ್ತಿತರೆ ಕಾರಣಗಳಿಂದ ಹೊಸ ನಗರಸಭಾ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಸೇರಿದಂತೆ ಯಾವುದೇ ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ ನೇರವಾಗಿ ನಗರಸಭೆ ಆಯುಕ್ತರೇ ಜವಾಬ್ದಾರಿಯಾಗಿದ್ದಾರೆ.
ಈಗಾಗಲೇ ತುಮಕೂರಿನ ಎಲ್ಲಾ ಬಡಾವಣೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯೇ ಎದ್ದು ಕಾಣುತ್ತಿದೆ. ಕೆಲವು ಕಡೆ ಕಸಕ್ಕಾಗಿ ಇಟ್ಟಿದ್ದ ಕಸದ ಕಂಟೈನರ್ ತುಂಬಿ ಹೋಗಿ ರಸ್ತೆ ಬದಿಯಲ್ಲಿ ಕಸ ಬೀಳುತ್ತಿದೆ. ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ಈ ಕಸವು ಕೊಳೆತು ನಾರುತ್ತಿದೆ. ಅಲ್ಲದೇ ನೊಣ, ಸೊಳ್ಳೆ, ಹಂದಿಗಳ ಹಾವಳಿಯಿಂದಾಗಿ ಜನತೆ ಮೂಗು ಮುಚ್ಚಿಕೊಂಡು ಹೋಗುತ್ತಿದ್ದಾರೆ. ಎಲ್ಲಕ್ಕೂ ಆತಂಕದ ವಿಷಯವೆಂದರೆ ಸಾಂಕ್ರಾಮಿಕ ರೋಗಗಳಾದ ಡೆಂಘಿ, ಮಲೇರಿಯಾ ಮುಂತಾದ ಕಾಯಿಲೆಗಳಿಗೆ ಜನತೆ ತುತ್ತಾಗುತ್ತಿದ್ದಾರೆ.
ಆಸ್ಪತ್ರೆ ಮುಂದೆ ಜನಜಂಗುಳಿ: ಈಗಾಗಲೇ ಪರಿಸರ ಮಾಲಿನ್ಯದಿಂದಾಗಿ ದಿನೇ ದಿನೇ ರೋಗದಿಂದ ನರಳುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು ಪ್ರತಿ ದಿನ ಆಸ್ಪತ್ರೆಗೆ ಎಡತಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅಲ್ಲದೇ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಮತ್ತಷ್ಟು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ.
ಇದೆಲ್ಲದರ ಬಗ್ಗೆ ಮಾಹಿತಿ ಇದ್ದರೂ ಕೂಡ ನಗರಸಭೆ ಅಧಿಕಾರಿಗಳು ಗಮನಹರಿಸದೆ ಎಂದಿನಂತೆ  ನಿದ್ದೆಗೆ ಶರಣರಾಗಿದ್ದಾರೆ. ಕಸ ವಿಲೇವಾರಿ ಮಾಡದೇ ಇದ್ದರೆ ನಗರಸಭೆ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ತುಮಕೂರಿನ ಜನತೆ ನೀಡುತ್ತಿದ್ದರೂ ಕೂಡ ಅಧಿಕಾರಿಗಳು ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ.
ಹೀಗಾಗಿ ಜಿಲ್ಲಾ ಕೇಂದ್ರವೂ ಆಗಿರುವ ತುಮಕೂರು ಈಗ ಮಾಲಿನ್ಯಯುಕ್ತ ನಗರವಾಗಿ ಬೆಳೆಯುವಂತಾಗಿದೆ. ಬೆಂಗಳೂರಿಗೆ 18 ಜಿಲ್ಲೆಗಳನ್ನು ಸಂಪರ್ಕಿಸುವ ಹೆಬ್ಬಾಗಿಲು ಎಂದೇ ಖ್ಯಾತಿ ಗಳಿಸಿರುವ ತುಮಕೂರಲ್ಲಿ ಈಗ ಕಸದ್ದೇ ದೊಡ್ಡ ತಲೆ ನೋವಾಗಿದೆ. ಆದರೆ ಕಸವನ್ನು  ವ್ಯವಸ್ಥಿತ ರೀತಿಯಲ್ಲಿ ವಿಲೇವಾರಿ ಮಾಡುವ ಗೋಜಿಗೆ ಹೋಗದ ನಗರಸಭೆ ಅಧಿಕಾರಿಗಳು ತುಮಕೂರಿನ ಜನತೆಗೆ ಸಿಂಹ ಸ್ವಪ್ನರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement