ಪರಿಸರ ಸಂರಕ್ಷಣೆ ಯಾವುದೇ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ
ಕ.ಪ್ರ. ವಾರ್ತೆ , ಕುಣಿಗಲ್ , ಜೂ. 5
ಪರಿಸರ ಸಂರಕ್ಷಣೆ ಯಾವುದೇ ಒಬ್ಬ ವ್ಯಕ್ತಿಯ ಕೈಯಿಂದ ಸಾಧ್ಯವಿಲ್ಲ, ಎಲ್ಲರೂ ಪರಸ್ಪರ ಸಹಕಾರ ಮನೋಭಾವದಿಂದ ನಮಗೂ ಹಾಗೂ ನಮ್ಮ ಮುಂದಿನ ಪೀಳಿಗೆಯವರಿಗೆ ಉತ್ತಮ ಆರೋಗ್ಯ ದೊರಕಿಸಿಕೊಡುವ ದಿಸೆಯಲ್ಲಿ ಬದ್ಧತೆಯಿಂದ ಶ್ರಮಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಕಾರ್ಯ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಆರ್.ಶಾರದಾ ತಿಳಿಸಿದರು.
ಬುಧವಾರ, ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಕಂದಾಯ, ಅರಣ್ಯ ಹಾಗೂ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ನ್ಯಾಯಾಲಯ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ, ಪರಿಸರ ದಿನಾಚರಣೆಯಂದು ಕೇವಲ ಗಿಡನೆಟ್ಟು, ನಂತರ ನೆಟ್ಟಗಿಡವನ್ನು ಪೋಷಿಸದೆ, ಕೇವಲ ನೆಪಮಾತ್ರಕ್ಕೆ ಪರಿಸರದಿನಾಚರಣೆ ನಡೆಸುವುದರಿಂದ ಪರಿಸರ ಸಂರಕ್ಷಣೆಯಾಗುವುದಿಲ್ಲ ಎಂದರು.
ಪರಿಸರ ಸಂರಕ್ಷಣೆ ಸಾಧ್ಯ: ಇದೊಂದು ಪರಸ್ಪರ ಸಹಕಾರ, ಸಮಾನ ಮನೋಭಾವದೊಂದಿಗೆ ಉತ್ತಮ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಬದ್ಧತೆಯಿಂದ ಎಲ್ಲರೂ ಶ್ರಮಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ನಮ್ಮ ಪೂರ್ವಜರು ನಮಗಾಗಿ ಉತ್ತಮ ಪರಿಸರವನ್ನು ನೀಡಿ ಹೋಗಿದ್ದಾರೆ, ಆದರೆ ಹಿಂದಿನ ಪೀಳಿಗೆ ಹಿರಿಯರು ಕೊಟ್ಟಂತಹ ಉತ್ತಮ ಪರಿಸರವನ್ನು, ಈ ಪೀಳಿಗೆಯ ನಾವುಗಳು, ನಮ್ಮ ಮುಂದಿನ ಪೀಳಿಗೆಗೆ ಇನ್ನಷ್ಟು ಸ್ವಚ್ಛಗೊಳಿಸಿ ನೀಡುವ ಬದಲು ಕಲುಶಿತಗೊಳಿಸುತ್ತಿರುವುದು ನಿಜಕ್ಕೂ ಖೇದಕರ ಎಂದರು.
ತಹಸೀಲ್ದಾರ್ ಜಗದೀಶ್, ಮಾನವನ ಸ್ವಾರ್ಥಪರ ಚಿಂತನೆಯಿಂದ ಭೂಮಿಯ ಸತತ ದೌರ್ಜನ್ಯದ ಪರಿಣಾಮ ಇಂದು ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಪರಿಸರ ವಿಕೋಪಗಳಿಗೆ ನಾಂದಿಯಾಡಿದೆ,
ಇನ್ನಾದರೂ ಎಚ್ಚೆತ್ತು ಪ್ರಕೃತಿಯ ಮೇಲಿನ ದೌರ್ಜನ್ಯವನ್ನು ಮಾನವರು ಕಡಿಮೆಮಾಡಿದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಬಳುವಳಿಯಾಗಿ ನೀಡಬಹುದೆಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ದಯಾನಂದ, ಎಪಿಪಿ ಸುರೇಖಾ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಜಿ.ಲೋಕೇಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿಶ್ವನಾಥ್, ಪಿಎಸೈ ಗುರುಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.