'ಕಾನೂನಷ್ಟೇ ಪರಿಸರವೂ ಮುಖ್ಯ'
ತಿಪಟೂರು: ಪ್ರಕೃತಿಯ ಕೊಡುಗೆಯಾದ ಸ್ವಚ್ಛ ಹಾಗೂ ಆಹ್ಲಾದಕರ ಪರಿಸರದ ಸಮತೋಲನ ಕಾಪಾಡಿಕೊಳ್ಳಬೇಕಾದರೆ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಹೊಣೆಗಾರಿಕೆಯಾಗಿದ್ದು, ಗಿಡ ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವತ್ತ ಪಣತೊಡಬೇಕೆಂದು 5ನೇ ಅಪಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಗೀತಾ ಕರೆ ನೀಡಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ,ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವನಿಗೆ ಕಾನೂನು ಎಷ್ಟು ಮುಖ್ಯವೋ, ಪರಿಸರವೂ ಅಷ್ಟೇ ಮುಖ್ಯ. ಇಂದು ಮಾನವ ತನ್ನ ವಿವಿಧ ಸ್ವಾರ್ಥಕ್ಕೆ ಪರಿಸರವನ್ನು ಹಾಳುಗೆಡುವುತಿದ್ದು, ಇದು ನಿಲ್ಲಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಖಂಡಿತಾ ಶಪಿಸುವಂತಾಗುತ್ತದೆ ಎಂದರು.
ಸಿವಿಲ್ ಹಿರಿಯ ನ್ಯಾಯಾಧೀಶರಾದ ಕೆ.ಎಂ. ರಾಜಶೇಖರ್ ಮಾತನಾಡಿ ನಾವು ಇಂದು ಪರಿಸರವನ್ನು ಸಂರಕ್ಷಿಸಿ ಉಳಿಸುವ ವಿಚಾರದಲ್ಲಿ ಬಹಳ ಹಿಂದೆ ಉಳಿದಿದ್ದೇವೆ. ಆದ್ದರಿಂದ ಗಿಡ ಮರಗಳನ್ನು ನೆಡುವ ಮೂಲಕ ಆರೋಗ್ಯಕರ ಪರಿಸರ ಸೃಷ್ಟಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಮಾದರಿ: ಶಾಸಕ ಕೆ.ಷಡಕ್ಷರಿ ಮಾತನಾಡಿ ಸಭೆ ಸಮಾರಂಭಗಳಲ್ಲಿ ಅತಿಥಿಗಳಿಗೆ ಹಾರ, ತುರಾಯಿಗಳನ್ನು ಹಾಕುವ ಬದಲು ಗಿಡಗಳನ್ನು ನೆಟ್ಟರೆ ಮುಂದಿನ ಪೀಳಿಗೆಗೆ ಮಾದರಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹ ಪರಿಸರದ ಬಗ್ಗೆ ಅಪಾರ ಕಾಳಜಿ ವಹಿಸಿ ಸಂರಕ್ಷಿಸಬೇಕೆಂದು ತಿಳಿಸಿದರು. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಜಯಣ್ಣ ವಹಿಸಿದ್ದರು.
ತಹಸೀಲ್ದಾರ್ ಮಂಜುನಾಥ್, ಅರಣ್ಯಾಧಿಕಾರಿ ಸತ್ಯನಾರಾಯಣ, ಪೌರಾಯುಕ್ತ ಚಂದ್ರಶೇಖರ್, ನಗರ ಪೊಲೀಸ್ ಠಾಣೆ ಸಿಪಿಐ ನಾಗರಾಜು ಸೇರಿದಂತೆ ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಗರದ ವಿವಿಧ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಹಸಿರು ಪ್ರತಿಜ್ಞೆ ಮಾಡಲಾಯಿತು.