ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ
ದೇವನಹಳ್ಳಿ: ತಾಲೂಕಿನ ಕುಂದಾಣ ಹೋಬಳಿಯ ಮುದ್ದನಾಯಕನಹಳ್ಳಿ ಗ್ರಾಮದ ಬಳಿಯ ಸರ್ಕಾರಿ ಗೋಮಾಳ ಮತ್ತು ಖಾಸಗೀ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ತಯಾರು ಮಾಡುವ ಕೇಂದ್ರಗಳ ಮೇಲೆ ಶುಕ್ರವಾರ ಬೆಳಗ್ಗೆ ಇಲ್ಲಿನ ತಾಲೂಕು ಕಚೇರಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ನೂರಾರು ಅಡಿ ಪೈಪ್ಗಳನ್ನು ಹಾಗೂ ಒಂದು ಡೀಸೆಲ್ ಯಂತ್ರವನ್ನು ನಾಶಪಡಿಸಿದರು.
ಮುದ್ದನಾಯಕನಹಳ್ಳಿ ಬಳಿ ಅಪಾರವಾದ ಹತ್ತಾರು ಮರಳು ಫಿಲ್ಟರ್ ಕೇಂದ್ರಗಳಿದ್ದು ಅಧಿಕಾರಿಗಳು ಬರುತ್ತಿರುವ ಸೂಚನೆ ತಿಳಿದೊಡನೆ ಸ್ಥಳದಲ್ಲಿದ್ದ ಎಲ್ಲರೂ ಪಾರಾಗಿ ದೂರ ನಿಂತು ಅಧಿಕಾರಿಗಳು ಮತ್ತು ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂದು ಗಮನಿಸುತ್ತಿದ್ದರು. ಅಲ್ಲದೆ ಮುಂದಿನ ಅಕ್ರಮ ಮರಳು ತಯಾರಿಕಾ ಕೇಂದ್ರಗಳಿಗೆ ಸುದ್ದಿ ಮುಟ್ಟಿಸುತ್ತಿದ್ದರು.
ಮುದ್ದನಾಯಕನಹಳ್ಳಿಯ ಸರ್ವೆ ನಂ 61, 62 ಹಾಗೂ 112 ರಲ್ಲಿ ಅಕ್ರಮವಾಗಿ ಮಾರಾಟಕ್ಕೆ ಸಿದ್ಧವಿರುವ ಮರಳು ರಾಶಿ ಗುಡ್ಡದಂತೆ ಅಲ್ಲಲ್ಲಿ ಕಂಡು ಬಂತು. ಆದರೆ ಸ್ಥಳದಲ್ಲಿ ಯಾರೂ ಇರಲಿಲ್ಲ, ಆಗ ತಾನೆ ಮರಳು ಕೆಲಸದಲ್ಲಿ ತೊಡಗಿ ವಾಪಸ್ ಬಂದಿದ್ದ ಎರಡು ಜೆಸಿಬಿಗಳು ನಿಂತಿದ್ದವು, ಕನ್ನಡ ಭಾಷೆ ಬಾರದ ಕಾರ್ಮಿಕರು ಇದ್ದರು.
ಕೆಲವು ಮರಳು ಅಡ್ಡೆಗಳಲ್ಲಿ ಅಕ್ರಮವಾಗಿ ವಿದ್ಯುತ್ (ಕಳ್ಳತನ) ಬಳಸಲು ನೇರವಾಗಿ ವಿದ್ಯುತ್ ಕಂಬಕ್ಕೆ ವೈರ್ಗಳನ್ನು ಎಳೆದಿದ್ದರು. ದಾಳಿ ಸಂದರ್ಭದಲ್ಲಿ ಡೆಪ್ಯೂಟಿ ತಹಸೀಲ್ದಾರ್ ಅಜಿತ್ ರೈ, ಗ್ರಾಮ ಸಹಾಯಕರಾದ ಮಹೇಶ್, ರಮೇಶ್, ವೆಂಕಟೇಶ್ ಹಾಗೂ ಸುದರ್ಶನ್ ಇದ್ದರು.
ಅನಧಿಕೃತ ಸಂಘ: ತಾಲೂಕಿನ ಕುಂದಾಣ ಹೋಬಳಿಯಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಮಾಡುವ ಸಾವಿರಾರು ಕಾರ್ಮಿಕರಿರುವ (ತಯಾರಕರು ಮತ್ತು ಸಾಗಣೆಕಾರರು ಸೇರಿ) ಅನಧಿಕೃತ ಸಂಘವಿದೆ. ಈ ಸಂಘದಲ್ಲಿ ಎಲ್ಲ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಆದರೆ ಈ ಸಂಘಕ್ಕೆ ಸೇರಲು ಯಾವುದೇ ಶುಲ್ಕವಿಲ್ಲ, ಯಾವುದಾದರೂ ಅಧಿಕಾರಿಗಳು ದಾಳಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಸದಸ್ಯನಿಗೆ ಗೊತ್ತಾದರೂ ಕೂಡಲೆ ಎಲ್ಲ ಮರಳು ತಯಾರಿಕಾ ಕೇಂದ್ರಗಳು ಸ್ಥಗಿತವಾಗುವುದರೊಂದಿಗೆ ಮರಳು ತುಂಬಿದ ವಾಹನಗಳು ರಸ್ತೆಯಿಂದ ಮಾಯವಾಗುತ್ತವೆ. ಈ ದಂಧೆ ನಿಲ್ಲಿಸಬೇಕಾದರೆ ಅಧಿಕಾರಿಗಳು ಯಾರಿಗೂ ತಿಳಿಯದ ರೀತಿ ಪ್ರತಿ ವಾರಕ್ಕೆ ಎರಡು ಮೂರು ಬಾರಿ ದಾಳಿ ಮಾಡಿದರೆ ಮಾತ್ರ ನಿಲ್ಲಬಹುದು.