ಆಡಳಿತದಲ್ಲಿ ನಾಲ್ಕು ಪಕ್ಷಗಳ ಹಿಡಿತ
ತುರುವೇಕೆರೆ: ಬಹುಶಃ ಈ ಕ್ಷೇತ್ರದಲ್ಲಿರುವ ವೈಶಿಷ್ಟ್ಯ ಬೇರೆಲ್ಲೂ ಇರಲಿಕ್ಕಿಲ್ಲ. ಕಾರಣ ತುರುವೇಕೆರೆಯಲ್ಲಿ ಮೂರು ಪಕ್ಷಗಳ ಶಾಸಕರು ಇದ್ದಾರೆ.
ಇತ್ತೀಚಿನ ಚುನಾವಣೆಯಲ್ಲಿ ಜೆಡಿಎಸ್ನ ಎಂ.ಟಿ.ಕೃಷ್ಣಪ್ಪ ಶಾಸಕರಾಗಿ ಚುನಾಯಿತರಾಗಿದ್ದಾರೆ. ಕೆಜೆಪಿಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀನಾರಾಯಣ್ ವಿಧಾನ ಪರಿಷತ್ನ ಸದಸ್ಯರಾಗಿದ್ದಾರೆ. ಬಿಜೆಪಿಯಿಂದ ನವರಸ ನಾಯಕ ಜಗ್ಗೇಶ್ ಸಹ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇವುಗಳ ಮಧ್ಯೆ ಆಡಳಿತ ಪಕ್ಷವಾಗಿ ಕಾಂಗ್ರೆಸ್ ಇದೆ. ಇಂತಹ ಸ್ಥಿತಿಯಲ್ಲಿ ತಾಲೂಕಿನ ಅಧಿಕಾರಿಗಳ ಸ್ಥಿತಿಯಂತೂ ಕೆಂಡದ ಮೇಲೆ ನಡೆಯುವಂತಹ ಸ್ಥಿತಿಯಂತಾಗಿದೆ.
ಹಸ್ತಕ್ಷೇಪ:ಕಳೆದ ಚುನಾವಣೆಗೆ ಹಿಂದೆ ಮೂರು ಪಕ್ಷಗಳ ಹಸ್ತಕ್ಷೇಪವಿತ್ತು. ಆದರೆ ಈಗ ಹೆಚ್ಚುವರಿಯಾಗಿ ಕಾಂಗ್ರೆಸ್ ಸೇರ್ಪಡೆಯಾಗಿದೆ. ಪ್ರತಿಯೊಂದು ಕಾಮಗಾರಿಗೆ, ಪ್ರತಿಯೊಂದು ಯೋಜನೆಗೆ ಈಗ ನಾಲ್ಕು ಪಕ್ಷಗಳದ್ದು ಹಸ್ತಕ್ಷೇಪವಿರುತ್ತದೆ. ಜಗ್ಗೇಶ್ ಹಾಗೂ ಎಂ.ಡಿ.ಲಕ್ಷ್ಮೀನಾರಾಯಣ್ ತಾಲೂಕಿನ ಅಭಿವೃದ್ಧಿಗೆ ಯಾವ ಕಾಮಗಾರಿ ತಂದಿದ್ದಾರೆ ಎಂಬುದೇ ಇನ್ನೂ ತಿಳಿದಿಲ್ಲ. ಸರ್ಕಾರದಿಂದ ಬರುವ ಅಭಿವೃಧ್ಧಿ ಕಾಮಗಾರಿಗಳಿಗೆ ತಮ್ಮದೇ ಕಾರ್ಯಕರ್ತರಿಗೆ ನೀಡಬೇಕು ಎಂಬ ಒತ್ತಡ ಸಹಜವಾಗಿ ಅಧಿಕಾರಿಗಳ ಮೇಲಿರುತ್ತದೆ. ಸ್ಥಳೀಯ ಚುನಾಯಿತ ಶಾಸಕರ ಮಾತಿಗೆ ಬೆಲೆ ಕೊಡಬೇಕಾದದ್ದು ಸಹ ಅಧಿಕಾರಿಗಳ ಮೊದಲ ಆದ್ಯತೆ. ಆದರೆ ಈ ಈರ್ವರೂ ತಾವೂ ಸಹ ಶಾಸಕರೇ ಎಂಬಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ. ಈಗ ಕಾಂಗ್ರೆಸ್ ಸ್ಥಳೀಯವಾಗಿ ಠೇವಣಿ ಕಳೆದುಕೊಂಡಿದ್ದರೂ ಸಹ ಸ್ಥಳೀಯವಾಗಿ ಹಲವಾರು ಕಾಂಗ್ರೆಸ್ ಮುಖಂಡರು ಬಹಳ ಚುರುಕಾಗಿದ್ದಾರೆ. ಅವರು ಅಧಿಕಾರಿಗಳ ಮೇಲೆ ಸರ್ಕಾರದಿಂದ ಅಥವಾ ತಮ್ಮ ಪಕ್ಷದ ಮುಖಂಡರಿಂದ ಒತ್ತಡ ತರುವ ಎಲ್ಲಾ ಸಾಧ್ಯತೆಗಳೂ ಇವೆ. ಹಾಗಾಗಿ ಅಧಿಕಾರಿಗಳು ತಾವು ಯಾರ ಮಾತು ಕೇಳಬೇಕು ಎಂಬ ಜಿಜ್ಞಾಸೆಯಲ್ಲಿದ್ದಾರೆ. ಯಾರ ಪರ ಕೆಲಸ ಮಾಡಿಕೊಟ್ಟರೂ ಸಹ ಇತರರಿಗೆ ಸಿಟ್ಟು. ಕಾಮಗಾರಿ ಅಥವಾ ಕೆಲಸ ಸ್ಪಲ್ಪ ವ್ಯತ್ಯಾಸವಾದರೂ ಸಹ ತನಿಖೆ ಅಥವಾ ವಿಚಾರಣೆ ಎದುರಿಸಬೇಕು ಎಂಬ ಆತಂಕ ಅಧಿಕಾರಿಗಳಿಗೆ ಮನೆ ಮಾಡಿದೆ.
ಸಾಮಾನ್ಯವಾಗಿ ಪೊಲೀಸ್ ಠಾಣೆಯಂತೂ ರಾಜಕಾರಣಿಗಳು ಕೈಯಾಡಿಸುವ ಸ್ಥಳವಾಗಿದೆ. ಇಲ್ಲಿ ಯಾರ ಪರ ವಹಿಸಿಕೊಂಡರೂ ಸಹ ಇತರೆ ಪಕ್ಷದ ಪ್ರತಿಭಟನೆ ಗ್ಯಾರಂಟಿ. ಖಾಜಿ ನ್ಯಾಯ ಮಾಡಿದರೂ ಕಷ್ಠ, ಮಾಡದಿದ್ದರೂ ಕಷ್ಟ ಎಂಬ ಸ್ಥಿತಿ ತಲುಪಲಿದೆ. ಈಗಾಗಲೇ ಇತಿಹಾಸವನ್ನು ತಿರುಗಿ ನೋಡಿದರೆ ಪರ ವಿರೋಧಗಳು ಕಂಡು ಬಂದಿವೆ. ಈಗಷ್ಟೇ ಚುನಾವಣೆ ಮುಗಿದಿದೆ. ಇದರಲ್ಲಿ ಜೆಡಿಎಸ್ ಗೆದ್ದು ತನ್ನ ಪ್ರಭುತ್ವ ಸಾಧಿಸಿದೆ. ಆದರೆ ಉಳಿದ ಪಕ್ಷಗಳೂ ಸಹ ತಮ್ಮ ಪ್ರಭುತ್ವ ಸಾಧನೆಗೆ ಮುಂದಾಗುತ್ತಿವೆ. ಈ ಪಕ್ಷಗಳ ಮುಖಂಡರ ಹಾಗೂ ಕಾರ್ಯಕರ್ತರ ಸಿಟ್ಟು ಸೆಡವಿಗೆ ಹಲವಾರು ಅಮಾಯಕ ಅಧಿಕಾರಿಗಳು ಬಲಿಯಾಗುವುದಂತೂ ನಿಶ್ಚಿತ. ಯಾರಿಗೇಳೋಣ ನಮ್ ಪ್ರಾಬ್ಲಂ ಎಂಬಂತಾಗಿದೆ ಅಧಿಕಾರಿಗಳ ಸ್ಥಿತಿ.