ತುಮಕೂರು: 63 ಶಂಕಿತ ಡೆಂಘೀ ರೋಗಿಗಳು ಪತ್ತೆ
ಕ.ಪ್ರ.ವಾರ್ತೆ ತುಮಕೂರು ಜೂ.7
ಜಿಲ್ಲೆಯಲ್ಲಿ ಒಟ್ಟು 63 ಶಂಕಿತ ಡೆಂಘೀ ರೋಗಿಗಳನ್ನು ಗುರುತಿಸಿದ್ದು, 42 ಮಂದಿ ರಕ್ತದ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷಿಸಲಾಗಿ ಒಟ್ಟು 31 ಡೆಂಘೀ ಪ್ರಕರಣ ದೃಢಪಟ್ಟಿವೆ.
ಜಿಲ್ಲೆಯಲ್ಲಿ ಈವರೆಗೆ ಡೆಂಘೀಯಿಂದ ಯಾರೂ ಮೃತಪಟ್ಟಿಲ್ಲ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಚ್. ವೀಣಾ ಅವರು ಮಾಹಿತಿ ನೀಡಿದರು.
ಉಲ್ಬಣ ಜ್ವರ ಪ್ರಕರಣ ಕಂಡು ಬಂದ 9 ಗ್ರಾಮಗಳಲ್ಲಿ ಚಿಕಿತ್ಸಾಲಯಗಳನ್ನು ತೆರೆದು ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಸಹಾಯಕರ ಮೂಲಕ 806 ಗ್ರಾಮಗಳಲ್ಲಿ 104077 ಮನೆಗಳಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡು ಅದರಲ್ಲಿ 158372 ನೀರಿನ ತಾಣಗಳನ್ನು ಗುರುತಿಸಿ, ಒಟ್ಟು 7988 ತಾಣಗಳಲ್ಲಿ ಈಡೀಸ್ ಲಾರ್ವ್ ಕಂಡು ಬಂದಿದ್ದು, ಇವುಗಳನ್ನು ನಿವಾರಣೆ ಮಾಡಲಾಗಿದೆ ಎಂದು ವಿವರಿಸಿದರು.
ದೃಢಪಟ್ಟಿವೆ: ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಈವರೆಗೆ 10 ದೃಢೀಕೃತ ಡೆಂಘೀ ಪ್ರಕರಣ, ಪಾವಗಡ ತಾಲೂಕಿನಲ್ಲಿ 5, ಕೊರಟಗೆರೆ 1, ತಿಪಟೂರು 4, ಶಿರಾ 4, ಕುಣಿಗಲ್ 1, ಗುಬ್ಬಿ 2, ಚಿ.ನಾ.ಹಳ್ಳಿ ತಾಲೂಕಿನಲ್ಲಿ 4 ಪ್ರಕರಣ ವರದಿಯಾಗಿದ್ದು, ಒಟ್ಟು 31 ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯಲ್ಲಿ ಒಟ್ಟು 25 ಗ್ರಾಮಗಳಲ್ಲಿ ಒಳಾಂಗಣ ಧೂಮೀಕರಣ ಕಾರ್ಯ ಕೈಗೊಳ್ಳಲಾಗಿದ್ದು, ಎನ್.ಆರ್.ಎಚ್.ಎಂ. ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ 36 ಗ್ರಾಮಪಂಚಾಯತಿಗಳ ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ ನಡೆಸಿ, 5466 ವಿದ್ಯಾರ್ಥಿಗಳಿಗೆ ಡೆಂಘೀ ಮತ್ತು ಚಿಕೂನ್ ಗೂನ್ಯಾ ರೋಗದ ಬಗ್ಗೆ ಮಾಹಿತಿ ನೀಡಲಾಗಿದೆ. ಎನ್.ಆರ್.ಎಚ್.ಎಂ ಯೋಜನೆಯಡಿ 36 ಗ್ರಾಮಪಂಚಾಯತಿಗಳಲ್ಲಿ ಅಡ್ವೋಕೆಸಿ ಸಭೆಗಳನ್ನು ನಡೆಸಿ, 1038 ಸದಸ್ಯರುಗಳಿಗೆ ಡೆಂಘೀ ಮತ್ತು ಚಿಕೂನ್ ಗುನ್ಯಾ ರೋಗದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು 25 ಧೂಮೀಕರಣ ಯಂತ್ರಗಳಿದ್ದು, 6 ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದಲ್ಲದೆ ನಗರಸಭೆ, ಪುರಸಭೆ, ಗ್ರಾಮಪಂಚಾಯತಿ, ಪಟ್ಟಣ ಪಂಚಾಯತಿಗಳಲ್ಲಿ 25 ಯಂತ್ರಗಳಿದ್ದು, 16 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಎನ್.ಆರ್.ಎಚ್.ಎಂ. ಯೋಜನೆಯಡಿ 123 ಗ್ರಾಮಪಂಚಾಯತಿಗಳಲ್ಲಿ ಆಶಾಕಾರ್ಯಕರ್ತೆಯರಿಂದ 2573 ಗ್ರಾಮಗಳಲ್ಲಿ 339097 ಮನೆಗಳನ್ನು ಸಮೀಕ್ಷೆ ನಡೆಸಿದ್ದು, 728572 ನೀರಿನ ತಾಣಗಳನ್ನು ಗುರುತಿಸಿ, ಒಟ್ಟು 28679 ತಾಣಗಳಲ್ಲಿ ಕಂಡು ಬಂದಂತಹ ಈಡಿಸ್ ಲಾರ್ವ್ಗಳನ್ನು ನಿವಾರಣೆ ಮಾಡಲಾಗಿದೆ ಎಂದು ವೀಣಾ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಆರ್. ಬಾಸೂರ, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ರಜನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗುರುಸಿದ್ದಯ್ಯ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ. ಪುರುಷೋತ್ತಮ್ ಸೇರಿದಂತೆ ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.