ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಮಕೂರು-ಬೆಂಗಳೂರು ನಡುವೆ ನೈಟ್ ಹಾಲ್ಟ್ ಟ್ರೈನ್

Rashmi Kasaragodu
Updated On : 8 Jun 2013, 12:04 pm

ತುಮಕೂರು: ತುಮಕೂರು-ಬೆಂಗಳೂರು ನಡುವೆ ನೈಟ್ ಹಾಲ್ಟ್ ಟ್ರೈನ್ ಓಡಾಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೈರುತ್ಯ ರೇಲ್ವೆ ಬೆಂಗಳೂರು ವಿಭಾಗದ ಸೀನಿಯರ್ ಡಿ.ಓ.ಎಂ. ಪ್ರವೀಣ್ ಪಾಂಡೆ ಭರವಸೆ ನೀಡಿದ್ದಾರೆ.
ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ತುಮಕೂರು-ಬೆಂಗಳೂರು ನಡುವೆ ಸಂಚರಿಸುವ ಉದ್ಯೋಗಿ ರೇಲ್ವೇ ಪ್ರಯಾಣಿಕರ ನಿಯೋಗದೊಂದಿಗೆ ಮಾತನಾಡಿದ ಅವರು, ತುಮಕೂರು-ಬೆಂಗಳೂರು ನಡುವೆ ಪ್ರತ್ಯೇಕ ರೈಲು ಇಲ್ಲದಿರುವುದು ತಮ್ಮ ಗಮನಕ್ಕೂ ಬಂದಿದ್ದು, ಈ ನಿಟ್ಟಿನಲ್ಲಿ ಸಾಧ್ಯವಾದಷ್ಟೂ ಬೇಗನೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಿಕ್ಕಬಳ್ಳಾಪುರ-ಬೆಂಗಳೂರು, ಹಿಂದೂಪುರ-ಬೆಂಗಳೂರು, ಬಂಗಾರಪೇಟೆ-ಬೆಂಗಳೂರು ನಡುವೆ ರೈಲುಗಳು ಸಂಚರಿಸುತ್ತಿವೆ, ಆದರೆ, ತುಮಕೂರಿನಿಂದ ಬೆಂಗಳೂರಿಗೆ ದಿನ ನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಿದ್ದರೂ  ಪ್ರತ್ಯೇಕ ರೈಲು ವ್ಯವಸ್ಥೆ ಇಲ್ಲ. ಬೇರೆಡೆಯಿಂದ ಬರುವ ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ತುಮಕೂರು-ಬೆಂಗಳೂರು ನಡುವೆ ಪ್ರತ್ಯೇಕ ಹೆಚ್ಚುವರಿ ರೈಲು ಸಂಚಾರ ವ್ಯವಸ್ಥೆ ಅಗತ್ಯ ಮತ್ತು ಅನಿವಾರ್ಯ ಎಂಬುದು ಮನವರಿಕೆಯಾಗಿದೆ ಎಂದು ಪ್ರವೀಣ್ ಪಾಂಡೆ ನಿಯೋಗಕ್ಕೆ ತಿಳಿಸಿದರು.
ವೇಳೆ ಬದಲು: ಜುಲೈ 1 ರಿಂದ ಕುರ್ ಕುರೆ ರೈಲಿನ ವೇಳೆ ಬದಲಾಗುತ್ತಿದ್ದು, ಇದರಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರುವ ಉದ್ಯೋಗಿ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲವಾಗುತ್ತಿದೆ. ಈ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮೂರು ಮಾರ್ಗೋಪಾಯಗಳಿವೆ. ಮೊದಲನೆಯದು 7.20ಕ್ಕೆ ಬರುವ ಅರಸೀಕರೆ-ತುಮಕೂರು ಪ್ಯಾಸೆಂಜರ್ ವೇಳೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ 7.45ಕ್ಕೆ ತುಮಕೂರಿಗೆ ಬರುವಂತೆ ಮಾಡುವುದಲ್ಲದೆ, ಇನ್ನೂ ಹೆಚ್ಚುವರಿಯಾಗಿ ಒಂಬತ್ತು ಬೋಗಿಗಳನ್ನು ಅಳವಡಿಸುವುದು. ಎರಡನೆಯದು 9.13 ರ ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲನ್ನು 8  ಗಂಟೆ ವೇಳೆಗೆ ತುಮಕೂರಿಗೆ ಬರುವಂತೆ ಬದಲಾಯಿಸಿ ಹೆಚ್ಚುವರಿಯಾಗಿ 11 ಬೋಗಿಗಳನ್ನು ಅಳವಡಿಸುವುದು. ಅಲ್ಲದೆ, ತುಮಕೂರಿನಿಂದಲೇ ಬೆಳಗ್ಗೆ 8 ಕ್ಕೆ ಹೊರಡುವಂತೆ ಪ್ರತ್ಯೇಕ ಹೆಚ್ಚುವರಿ ರೈಲು ಪ್ರಾರಂಭಿಸುವುದಕ್ಕೆ ಅವಕಾಶಗಳಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ, 8 ಗಂಟೆಗೆ ತುಮಕೂರಿನಿಂದಲೇ ರೈಲು ಹೊರಡುವ ವ್ಯವಸ್ಥೆ ಬಗ್ಗೆ ಗಂಭೀರವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತ ಕರಣಂ ರಮೇಶ್, ಸಾಹಿತಿ ಬಾ. ಹ. ರಮಾಕುಮಾರಿ, ಚಕ್ರವರ್ತಿ, ಮೋಹನ್, ನಾಗರಾಜು, ಕಲ್ಪನಾ ಮತ್ತು ವಕೀಲರಾದ ಕುಮಾರಸ್ವಾಮಿ ಮತ್ತು ಸುರೇಶ್ ಪ್ರಯಾಣಿಕರ ನಿಯೋಗದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement