'ಪರಿಸರ ಸಂರಕ್ಷಣೆ ಅಗತ್ಯ'
ತುಮಕೂರು: ನಿಸರ್ಗದ ಮಳೆ ಚಕ್ರ, ಆಹಾರ ಸರಪಳಿ ಉಳಿಯಬೇಕಾದರೆ ನಾವು ಪರಿಸರ ಸಂರಕ್ಷಣೆ ಮಾಡಬೇಕೆಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ಸಿಂಗ್ ಅಭಿಪ್ರಾಯಪಟ್ಟರು.
ಅವರು ನಗರದ ಆಚಾರ್ಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ತುಮಕೂರು ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಅರಣ್ಯ ಸಚಿವಾಲಯದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನ 2012-13 ಉದ್ಘಾಟನಾ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಲಯ ಸಂರಕ್ಷಣಾಧಿಕಾರಿ ಬೈರಾರೆಡ್ಡಿ ಮಾತನಾಡಿ ಪರಿಸರ ಸಂರಕ್ಷಣೆ ಏಕೆ, ಹೇಗೆ ಎಂಬುದರನ್ನು ಬಗ್ಗೆ ವಿವರಿಸಿದರು. ಟಿ.ಜಿ. ಶಿವಲಿಂಗಯ್ಯ ಮಾತನಾಡಿ ಪರಿಸರ ಸಂರಕ್ಷಣೆ ಮಾಡಲು ಎಲ್ಲರೂ ನಿಸರ್ಗದ ಸಂಪನ್ಮೂಲಗಳಾದ ನೀರು, ಅರಣ್ಯ ಮತ್ತು ಜೀವವೈವಿಧ್ಯಗಳನ್ನು ಅಪವ್ಯಯ ಮಾಡದೆ ಮಿತವಾಗಿ ಬಳಸಬೇಕು. ಅಲ್ಲದೇ ಎಲ್ಲಾ ವಸ್ತುಗಳ ಪುನರ್ ಬಳಕೆ ಮಾಡಬೇಕು ಎಂದರು.
ಆಚಾರ್ಯ ವಿದ್ಯಾಪೀಠ ಶಾಲೆಯ ಮುಖ್ಯೋಪಾಧ್ಯಾಯ ಶಿವಕುಮಾರ್ ಮಾತನಾಡಿ ಮಕ್ಕಳು ಪರಿಸರ ಮಾಲಿನ್ಯ ಮಾರಕಗಳಾದ ಗಾಳಿ ಮಾಲಿನ್ಯ, ಶಬ್ದಮಾಲಿನ್ಯ ಮತ್ತು ಶಾಲೆ, ಬಸ್ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡಬೇಕು ಎಂದರು.
ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ವಿಶ್ವನಾಥ್ ಅವರು ಮಕ್ಕಳಿಗೆ ಆಹಾರವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಅಪವ್ಯಯ ನಿಲ್ಲಿಸಲು ಹಾಗೂ ಜೀವವೈವಿಧ್ಯತೆ ಸಂರಕ್ಷಣೆಗಾಗಿ ಹೆಚ್ಚು ಗಿಡಮರ ಬೆಳೆಸಬೇಕು ಎಂದರು.
ಸಿ. ಯತಿರಾಜು ಅವರು ಮಕ್ಕಳಿಗೆ ವಿಶ್ವ ಪರಿಸರ ದಿನಾಚರಣೆಯ ಮಹತ್ವ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ತಿಳಿ ಹೇಳಿದರು. ಶಾಲೆಯ ಸುಮಾರು 350 ಮಕ್ಕಳು ಹಾಗೂ 15 ಜನ ಶಿಕ್ಷಕರು ಸರಸ್ವತಿಪುರಂ ಹಾಗೂ ಮರಳೂರು ಬಡಾವಣೆಯ ರಸ್ತೆಗಳಲ್ಲಿ ಜಾಥಾ ನಡೆಸಿ ವಿಶ್ವ ಪರಿಸರ ದಿನಾಚರಣೆಯ ಮಹತ್ವ ತಿಳಿಸುವ ಘೋಷಣೆ ಕೂಗುತ್ತಾ ಎಲ್ಲಾ ಮನೆ ಅಂಗಡಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವ ತಿಳಿಸಿದರು.
ಆಚಾರ್ಯ ವಿದ್ಯಾಪೀಠದ ಮ್ಯಾನೇಜಿಂಗ್ ಡೈರೆಕ್ಟರ್ ಸನತ್ ಉಪಸ್ಥಿತರಿದ್ದರು. ಸೌಧಿಯಾ ಕೌಸರ್ ಸ್ವಾಗತಿಸಿದರು. ನಂತರ ವಿದ್ಯಾರ್ಥಿ ನಿಲಯರ ತಂಡ ಪರಿಸರ ಗೀತೆ ಹಾಡಿದರು. ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದ ಪ್ರಯುಕ್ತ ಸರಸ್ವತಿಪುರಂ ನ ಹೊಸ ಬಡಾವಣೆಗಳ ರಸ್ತೆಗಳ ಎರಡು ಬದಿಯಲ್ಲಿ 150 ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಯಿತು.