ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸಿ
ಕ.ಪ್ರ.ವಾರ್ತೆ ಮಧುಗಿರಿ ಜೂ 7
ಜೀವ ಸಂಕುಲ ಬೆಳವಣಿಗೆ, ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.
ಮಧುಗಿರಿ ಕಸಬಾ ಬಿಜವರ ಗ್ರಾಮದ ಶಿವಾನಂದ ಪ್ರೌಢಶಾಲೆ ಆವರಣದಲ್ಲಿ ಏರ್ಪಟಾಗಿದ್ದ ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ಶ್ರೀಯಾಂಕ ಏಜುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಾಡು ಬೆಳಸುವ ಮೂಲಕ ಜೀವ ವೈವಿಧ್ಯ ಸಂರಕ್ಷಣೆಗೆ ಮುಂದಾಗಬೇಕು. ಮರ, ಗಿಡ ಸಸ್ಯ ಸಂಕುಲ ಕಾಪಾಡಿದಾಗ ಮಾತ್ರ ಪ್ರಾಣಿ ಸಂಕುಲ ಜೀವಿಸಲು ಸಾಧ್ಯ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರಿಸರ ರಕ್ಷಿಸಲು ಎಲ್ಲರೂ ಕಟಿಬದ್ಧರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರಿಯಾಂಕ ಟ್ರಸ್ಟ್ ಅಧ್ಯಕ್ಷ ಎಂ.ವಿ. ಮೂಡ್ಲಗಿರೀಶ್ ಪ್ರತಿಯೊಬ್ಬರು ಗಿಡ ಬೆಳಸುವ ಮೂಲಕ ಪರಿಸರ ರಕ್ಷಣೆಗೆ ಅಧಿಕ ಒತ್ತು ಕೊಡಬೇಕು ಎಂದರು. ವಲಯ ಅರಣ್ಯಾಧಿಕಾರಿ ಗೋವರ್ದನ್ ಸಿಂಗ್, ಗ್ರಾ.ಪಂ.ಸದಸ್ಯ ಗಂಗಹನುಮಯ್ಯ, ಅಂಗನವಾಡಿ ಕಾರ್ಯಕರ್ತೆ ಪ್ರೇಮಾ, ಸಂಪನ್ಮೂಲ ಸದಸ್ಯ ನರಸರೆಡ್ಡಿ, ಶಿವಕುಮಾರ, ಗೋಪಾಲರೆಡ್ಡಿ, ಮಜುಂದಾರ್ ಇನ್ನು ಅನೇಕರು ಇದ್ದರು.