ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಎಲ್ಲರ ಹೊಣೆ
ಕ.ಪ್ರ.ವಾರ್ತೆ ತುಮಕೂರು ಜೂ.7
ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಿಗೆ ಕಲಿಯುವ ವಯಸ್ಸಿನಲ್ಲಿ ಸರಿಯಾದ ಶಿಕ್ಷಣ ದೊರಕಬೇಕು. ಎಳೆಯ ಮಕ್ಕಳನ್ನು ಶಾಲೆಗೆ ಕಳುಹಿಸದೆ, ಸ್ವಚ್ಛಂದ ವಾತಾವರಣದಲ್ಲಿ ಬೆಳೆಯಲು ಬಿಡದೆ, ಮಕ್ಕಳನ್ನು ಹೊಟ್ಟೆಪಾಡಿಗಾಗಿ ಕೆಲಸದ ಕೂಪಕ್ಕೆ
ತಳ್ಳುವಂತಹ ಉದ್ಯಮಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದ್ದು, ಆಪಾದಿತರಿಗೆ ಕಾರಾಗೃಹ ವಾಸ ಅಥವಾ 20 ಸಾವಿರ ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿರುತ್ತದೆ ಎಂದು ತಿಳಿಸಿದರು.
ವಿವಿಧ ಎನ್.ಜಿ.ಓ. ಸಂಘಟನೆಗಳಿಂದ ಜಿಲ್ಲೆಯಲ್ಲಿ ಒಟ್ಟು 929 ಬಾಲ ಕಾರ್ಮಿಕ ಮಕ್ಕಳನ್ನು ಗುರುತಿಸಿ, ಈ ಮಕ್ಕಳಿಗಾಗಿ 16 ಬಾಲ ಕಾರ್ಮಿಕ ವಸತಿ ಶಾಲೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 8 ಶಾಲೆಗಳಿಗೆ ಅನುಮೋದನೆ ದೊರಕಿದ್ದು, ಉಳಿದಂತೆ ಗುಬ್ಬಿ, ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲೂಕುಗಳಲ್ಲೂ ಬಾಲ ಕಾರ್ಮಿಕ ವಸತಿ ಶಾಲೆ ಪ್ರಾರಂಭಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರವಿಕುಮಾರ್ ಮತ್ತು ಕಾರ್ಮಿಕ ಅಧಿಕಾರಿ ಛಲಪತಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಗೋಡೆ ಬರಹ: ಜಿಲ್ಲೆಯಾದ್ಯಂತ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಮೂಡಿಸಲು ಗ್ರಾಮಪಂಚಾಯತಿ ಮಟ್ಟದಲ್ಲಿ ಗೋಡೆ ಬರಹ ಬರೆಸಲು ಕ್ರಮಕೈಗೊಳ್ಳುವಂತೆ ಮತ್ತು ಈ ನಿಟ್ಟಿನಲ್ಲಿ ಗ್ರಾಮಪಂಚಾಯತಿಗಳಿಗೆ ಸುತ್ತೋಲೆ ಕಳುಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಬೀದಿ ನಾಟಕದ ಮೂಲಕವೂ ಸಹ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಿದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ತಿಂಗಳಿಗೆ 2 ಬಾರಿಯಾದರೂ ಬಾಲ ಕಾರ್ಮಿಕ ಪದ್ಧತಿ ವ್ಯವಸ್ಥೆ ಜಾರಿಯಲ್ಲಿರುವ ಕಡೆ ದಾಳಿ ನಡೆಸಬೇಕು ಮತ್ತು ಮಕ್ಕಳನ್ನು ರಕ್ಷಿಸಬೇಕು ಎಂದು ಅವರು ಸೂಚಿಸಿದರು.
ವಿಭಾಗೀಯ ಮಟ್ಟದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಸ್ವಯಂಸೇವಾ ಪ್ರತಿನಿಧಿಗಳು, ಸ್ವಸಹಾಯ ಗುಂಪಿನ ಸದಸ್ಯರು, ಮಾಜಿ ತಾಲೂಕು ಪಂಚಾಯತಿ ಹಾಗೂ ಗ್ರಾ.ಪಂ. ಮಾಜಿ ಜನಪ್ರತಿನಿಧಿಗಳು, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರಿಗೆ ಬಾಲಕಾರ್ಮಿಕ ಪದ್ಧತಿ ನಿಯಂತ್ರಣ ಕುರಿತಂತೆ ಸಮಗ್ರ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಅವರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಅಧಿಕಾರಿಗಳ ಮನವಿ: ಶಿರಾ ತಾಲೂಕಿನ ಲಕ್ಷ್ಮೀನರಸಿಂಹ ರೂರಲ್ ಡೆವಲಪ್ಮೆಂಟ್ ಸೊಸೈಟಿ ಸರ್ಕಾರೇತರ ಸಂಸ್ಥೆ ವತಿಯಿಂದ ಪ್ರಾರಂಭವಾಗಿರುವ ವಿಶೇಷ ಬಾಲಕಾರ್ಮಿಕ ವಸತಿ ಶಾಲೆಯಲ್ಲಿ 34 ಮಕ್ಕಳು, ತುಮಕೂರು ತಾಲೂಕಿನ ಈಶ್ವರಿ ಮಹಿಳಾ ಸಮಾಜ ಸಂಸ್ಥೆಯ ಶಾಲೆಯಲ್ಲಿ 34, ಮಂಗಳಮ್ಮ ರಾಮೇಗೌಡ ಎಜುಕೇಷನ್ ಸೊಸೈಟಿ ಶಾಲೆಯಲ್ಲಿ 33, ಕುಣಿಗಲ್ ತಾಲೂಕಿನ ವಿನಾಯಕ ವಿದ್ಯಾಸಂಸ್ಥೆಯ 33, ಚಿ.ನಾ.ಹಳ್ಳಿ ತಾಲೂಕಿನ ಶ್ರೀ ಮರಿರಂಗನಾಥ ವಿದ್ಯಾಸಂಸ್ಥೆಯ 30 ಮಕ್ಕಳು, ಶಿರಾ ತಾಲೂಕಿನ ಸ್ವರ್ಣ ಸೋಷಿಯಲ್ ವೆಲ್ಫೇರ್ ಅಸೋಸಿಯೇಷನ್ ಸೊಸೈಟಿಯ ಶಾಲೆಯ 26 ಮಕ್ಕಳು, ತುರುವೇಕೆರೆ ನಂದಿನಿ ವಿದ್ಯಾಸಂಸ್ಥೆಯ ಶಾಲೆಯ 30 ಮಕ್ಕಳು ಮತ್ತು ತಿಪಟೂರಿನ ಶ್ರೀ ವೀರಭದ್ರ ಸ್ವಾಮಿ ಎಜುಕೇಷನ್ ಸೊಸೈಟಿಯ ವಸತಿ ಶಾಲೆಯಲ್ಲಿ 29 ಮಕ್ಕಳು ದಾಖಲಾಗಿದ್ದು, ಉಳಿದಂತೆ ಪಾವಗಡ, ಮಧುಗಿರಿ, ಕೊರಟಗೆರೆ, ಗುಬ್ಬಿ ತಾಲೂಕುಗಳಲ್ಲಿ ಎನ್.ಜಿ.ಓ. ಸಂಸ್ಥೆ ಮೂಲಕ 4 ವಿಶೇಷ ಶಾಲೆಗಳನ್ನು ತೆರೆಯಲು ಅನುಮೋದನೆ ನೀಡುವಂತೆ ಈ ಸಂದರ್ಭ ಕಾರ್ಮಿಕ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು.
ಜೂ.12 ರಂದು: ಪ್ರತಿ ವರ್ಷದಂತೆ ಈ ಬಾರಿಯೂ ಸಹ ಜೂನ್ 12 ರಂದು ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಭೆ ನಿರ್ಧರಿಸಿತು. ದಿನಾಚರಣೆಯಲ್ಲಿ ಎನ್.ಎಸ್.ಎಸ್., ಎನ್.ಸಿ.ಸಿ. ಮತ್ತು ಸ್ತ್ರೀಶಕ್ತಿ ಗುಂಪುಗಳು, ಆಶಾ ಕಾರ್ಯಕರ್ತೆಯರು, ಕಾರ್ಖಾನೆ, ಹೋಟೆಲ್, ಗ್ಯಾರೇಜ್ ಇತ್ಯಾದಿ ಮಾಲೀಕರನ್ನು ಆಹ್ವಾನಿಸಿ, ಈ ಅನಿಷ್ಠ ಪದ್ಧತಿಯ ವಿರುದ್ಧ ಕೈಜೋಡಿಸುವಂತೆ ಕಾರ್ಯಕ್ರಮ ರೂಪಿಸುವಂತೆ ಸಹ ಸಭೆ ನಿರ್ಧರಿಸಿತು.