ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ

Rashmi Kasaragodu
Updated On : 8 Jun 2013, 12:04 pm

ಕ.ಪ್ರ.ವಾರ್ತೆ   ಕುಣಿಗಲ್   ಜೂ. 7
ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಜನತೆ ತಮ್ಮ ಮಕ್ಕಳಿಗೆ ಕೇವಲ ಉದ್ಯೋಗಕಾಂಕ್ಷಿತ ಶಿಕ್ಷಣ ಕೊಡಿಸದೆ, ಈ ದೇಶದ ಸಂಸ್ಕಾರದ ಹಿರಿಮೆ, ಗರಿಮೆಗಳ ಬಗ್ಗೆ ಪರಿಪೂರ್ಣ ಅರಿವು ಮೂಡಿಸುವ ಶಿಕ್ಷಣ ಕೊಡಿಸುವ ಮೂಲಕ, ದೇಶದ ಮುಂದಿನ ಪ್ರಜೆಗಳಾದ ಇಂದಿನ ಮಕ್ಕಳನ್ನು ಸಂಸ್ಕಾರವಂತ ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ ಎಂದು ಮಾಯಸಂದ್ರ ಕಲ್ಪತರು ಅಶ್ರಮದ ಶಿವಕುಮಾರನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
 ಶುಕ್ರವಾರ, ಪಟ್ಟಣದಲ್ಲಿ ಐಡಿಎಫ್ ಸುಜೀವನ ಒಕ್ಕೂಟ ಕುಣಿಗಲ್ ಹಮ್ಮಿಕೊಂಡಿದ್ದ ನಾಲ್ಕನೇ ವರ್ಷದ ಸುಜೀವನ ವಾರ್ಷಿಕ ಸಮ್ಮಿಲನ ಸುವಾಸ-2013 ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ, ಗ್ರಾಮಾಂತರ ಪ್ರದೇಶದಲ್ಲೂ ಹಿರಿಯರನ್ನು ಅನಾದರದಿಂದ ಕಾಡುವ ಪ್ರಕರಣಗಳು ವರದಿಯಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ, ಮೊದಲು ಪಟ್ಟಣ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತಿದ್ದ ಇಂತಹ ಪ್ರಕರಣ ಈಗ ಗ್ರಾಮಾಂತರ ಪ್ರದೇಶದಲ್ಲೂ ಕಾಣಬರುತ್ತಿರುವುದರಿಂದ ನಮ್ಮ ಮಕ್ಕಳಿಗೆ ಗುರುಹಿರಿಯರನ್ನು ಗೌರವಿಸಿ, ಆರಾಧಿಸುವ ನಮ್ಮ ನೆಲದ  ಸಂಸ್ಕಾರಯುತ ಶಿಕ್ಷಣ ಕೊಡಿಸಬೇಕಾದ ಅವಶ್ಯಕತೆ ಹೆಚ್ಚಿದೆ ಎಂದರು.
ತರಬೇತಿ: ಕೇವಲ ಕೃಷಿ ಉದ್ದಿಮೆಯನ್ನೆ ನಂಬಿರುವ ರೈತರ ಸರ್ವತೋಮುಖ ಅಭಿವೃದ್ಧಿಗೆ, ಐಡಿಎಫ್ ನಂತಹ  ಸಂಸ್ಥೆಗಳು ಸಾವಯವ ಆರೋಗ್ಯಪೂರ್ಣ ಕೃಷಿ ಕೈಗೊಳ್ಳುವುದು ಸೇರಿದಂತೆ ಇತರೆ ಉಪಕಸುಬುಗಳಾದ ಹೈನುಗಾರಿಕೆ, ತೋಟಗಾರಿಕೆ ಸೇರಿದಂತೆ ಪೂರಕ ಕಸುಬುಗಳ ಬಗ್ಗೆ ತರಬೇತಿ ನೀಡಿ, ರೈತರನ್ನು ಸ್ವಾವಲಂಬಿಗಳನ್ನಾಗಿಸುವ ದಿಸೆಯಲ್ಲಿ ಕೈಗೊಂಡಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಸಂಘ, ಸಂಸ್ಥೆಗಳಿಂದ ಪಡೆಯುವ ಆರ್ಥಿಕ ಸವಲತ್ತನ್ನು ಸದ್ಬಳಕೆ ಮಾಡಿಕೊಂಡು, ಸಕಾಲದಲ್ಲಿ ಪಡೆದ ಸಾಲ ಹಿಂದಿರುಗಿಸಿ, ತಾವು ಅಭಿವೃದ್ಧಿಹೊಂದಿ, ಸಂಘಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದರು.
30 ಸಾವಿರ ಮಂದಿ ಸದಸ್ಯರು: ಐಡಿಎಫ್ ವ್ಯವಸ್ಥಾಪಕ ಟ್ರಸ್ಟಿ ವಿವೇಕಾನಂದ ಸಾಲಿಮಠ, ಕಳೆದ ನಾಲ್ಕುವರ್ಷಗಳ ಕೆಳಗೆ ಕೆಲವೆ ಮಂದಿಯಿಂದ ತಾಲೂಕಿನಲ್ಲಿ ಪ್ರಾರಂಭವಾದ ಐಡಿಎಫ್ ಈಗ 23ಸಾವಿರ ಕುಟುಂಬದ ಮೂವತ್ತು ಸಾವಿರ ಮಂದಿ ಸದಸ್ಯರನ್ನು ಹೊಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಡಿಜಿಎಂ ಶ್ರೀಕಾಂತ್ ಕಟ್ಟಿ, ಎಸ್ಬಿಐ ಬ್ಯಾಂಕ್ ದೇಶದಾದ್ಯಂತ 15 ಸಾವಿರ ಶಾಖೆ ಹೊಂದಿದ್ದು ಈ ಪೈಕಿ ಶೇಕಡಾ 70ರಷ್ಟು ಗ್ರಾಮಾಂತರ ಪ್ರದೇಶದ ಜನತೆಯ ಸೇವೆಗಾಗಿ ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪನೆಯಾಗಿವೆ. ಕುಣಿಗಲ್ ಶಾಖೆಯ ಮೂಲಕ ಗ್ರಾಮಾಂತರ ಐಡಿಎಫ್ ಒಕ್ಕೂಟಕ್ಕೆ 103ಕೋಟಿ ರು. ಸಾಲ ಸೌಲಭ್ಯ ಕಲ್ಪಿಸಿ ಗ್ರಾಮಾಂತರ ಪ್ರದೇಶದ ಜನತೆಯ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ಪರಿಣಾಮಕಾರಿ ಕ್ರಮ: ಜಿಪಂ ಸದಸ್ಯ ಡಾ.ಬಿ.ಎನ್.ರವಿ, ಐಡಿಎಫ್ ಸುಜೀವನ ಒಕ್ಕೂಟವು, ತಾಲೂಕಿನ ಗ್ರಾಮಾಂತರ ಪ್ರದೇಶದ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪ್ರಾಮಾಣಿಕ ಒತ್ತು ನೀಡಿ ಅವರಿಗೆ ಹಲವು ಕಸುಬುಗಳ ತರಬೇತಿ ನೀಡಿ,  ಸ್ವಾವಲಂಬನೆ ಸಾಧಿಸಲೂ ಪರಿಣಾಮಕಾರಿ ಕ್ರಮ ಕೈಗೊಂಡಿದ್ದು, ಕಡಿಮೆ ಅವಧಿಯಲ್ಲಿ  ಅದ್ಭುತ ಯಶಸ್ಸು ಸಾಧಿಸಿರುವುದು ನಿಜಕ್ಕೂ ಸರ್ಕಾರದ ಯಾವುದೇ ಇಲಾಖೆ ಮಾಡದಷ್ಟು ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದರು.
ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ವಟಿಕುಟ್ಟಿ ಫೌಂಡೇಷನ್ನ ನಿರ್ದೇಶಕ ಏರ್ ಮಾರ್ಷಲ್ ಜೋಸೆಫ್ನೇರಿ, ಕೃಷಿ ಇಲಾಖೆ ಸಹಾಯ ನಿರ್ದೇಶಕ ನಾರಾಯಣಸ್ವಾಮಿ, ಸಿಡಿಪಿಒ ವಿಶ್ವನಾಥ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧೆಡೆಯಿಂದ ಸಾವಿರಾರು ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದು, ವಿವಿಧ ಇಲಾಖೆಗಳು ವಸ್ತುಪ್ರದರ್ಶನ ಹಾಗೂ ರೈತ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಮಾರಾಟ ಮಳಿಗೆ ಆಯೋಜಿಸಿದ್ದು, ಸಾವಯವ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ಹತ್ತು ರೈತರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement