ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಕ.ಪ್ರ.ವಾರ್ತೆ ತುಮಕೂರು ಜೂ.7
ಇಲ್ಲಿನ ಹೇಮಾದ್ರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆಯನ್ನು ಹೇಮಾದ್ರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನ ಪ್ರಾಂಶುಪಾಲ ಬಿ.ಕೆ. ನಟರಾಜ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ನೀಲಕಂಠಪ್ಪ ವಿಶೇಷ ಆಹ್ವಾನಿತರಾಗಿ ಡಾ. ರವಿಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ರವಿಕುಮಾರ್, ಗುರುವನ್ನು ಮೀರಿಸುವಂತ ಶಿಷ್ಯರಾಗಬೇಕೆಂದು ಕರೆ ನೀಡಿದರು.
ನಮ್ಮ ಸಂಸ್ಕೃತಿಯಲ್ಲಿ ಬೇರು ಬಿಟ್ಟಿರುವ ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನೀಲಕಂಠಪ್ಪ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಂ.ಎಸ್.ಡಬ್ಲ್ಯೂ ಮತ್ತು ಬಿ.ಎಸ್.ಡಬ್ಲ್ಯೂ ಕೋರ್ಸ್ಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ವಿಫುಲವಾದ ಉದ್ಯೋಗಾವಕಾಶಗಳಿದ್ದು ನಿಮ್ಮ ಕಾಲೇಜಿನ ಬಾಗಿಲಿಗೆ ಉದ್ಯೋಗ ಹುಡುಕಿಕೊಂಡು ಬರುತ್ತಿರುವುದು ಕಾಣಬಹುದಾಗಿದೆ ಎಂದು ತಿಳಿಸಿದರು.
ಕ್ಯಾಂಪಸ್ ಸಂದರ್ಶನ: ಈಗಾಗಲೇ ನಮ್ಮ ಸಂಸ್ಥೆಯಿಂದ ಹೇಮಾದ್ರಿ ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದ್ದು 17 ಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಲಿದ್ದೇವೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಬಿ.ಕೆ.ನಟರಾಜ ಅವರು ಸಿಗುವ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಮೋಹನ್.ವಿ.ಟಿ, ಕೆ.ಸಿ. ಲಕ್ಷ್ಮೀಕಾಂತ ಮತ್ತು ನಿಸರ್ಗಪ್ರಿಯಾ.ಟಿ.ಎಸ್ ಅವರು ಹಾಜರಿದ್ದರು.
ಪ್ರಶಿಕ್ಷಣಾರ್ಥಿ ಪುಷ್ಪಾಬಾಯಿ.ಆರ್.ಕೆ ಮತ್ತು ಸಂಗಡಿಗರು ಪ್ರಾರ್ಥಿಸಿದರು, ನಂದಿನಿ ನಿರೂಪಿಸಿದರು, ಸುಧಾಮಣಿ ಸ್ವಾಗತಿಸಿದರು. ಸುಮಾ ವಂದಿಸಿದರು.