26ರಂದು ವಿವೇಕಾನಂದರ ರಥಯಾತ್ರೆ
ಕ.ಪ್ರ.ವಾರ್ತೆ ಮಧುಗಿರಿ ಜೂ. 8
ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ರಾಮಕೃಷ್ಣ ಮಠ ಹಾಗೂ ಮಿಷನ್ ವತಿಯಿಂದ ಆಯೋಜಿಸಿರುವ ಸ್ವಾಮಿ ವಿವೇಕಾನಂದರ ಭವ್ಯ ರಥಯಾತ್ರೆ ಜೂ.26ರಂದು ಆಂಧ್ರ ಗಡಿ ಭಾಗ ಪಾವಗಡದಿಂದ ಮಧುಗಿರಿಗೆ ಆಗಮಿಸಲಿದೆ. ಅಂದು ಮಧುಗಿರಿ ಪಟ್ಟಣದ ನಾಗರಿಕರು ಭಕ್ತಿ ಭಾವದಿಂದ ಸ್ವಾಗತಿಸಬೇಕು ಎಂದು ತಗ್ಗಿಹಳ್ಳಿ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ರಮಾನಂದ ತಿಳಿಸಿದ್ದಾರೆ.
ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಮಿತಿ ಆಶ್ರಯದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರದತ್ತ. ನಮ್ಮ ದೇಶದ ಯುವ ಜನತೆ ಸತತ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಕೆಲಸ ನಿರ್ವಹಿಸಬೇಕು ಎಂಬುದು ಸ್ವಾಮಿ ವಿವೇಕಾನಂದರ ಸಂದೇಶವಾಗಿತ್ತು.
ಆ ನಿಟ್ಟಿನಲ್ಲಿ ಸರ್ವಸ್ವವನ್ನು ತ್ಯಾಗ ಮಾಡಿ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಬಲ್ಲ ಯುವಕರು ನಮ್ಮ ದೇಶಕ್ಕೆ ಬೇಕು ಎಂದರು.
ಆಗ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂಬ ದೂರದೃಷ್ಟಿಯಿಂದ ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ಧ್ಯೇಯ ವಾಕ್ಯ ಮೊಳಗಿಸಿ ಯುವ ಜನಾಂಗವನ್ನು ಎಚ್ಚರಿಸಿದರು.
ಹಿಂದು ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಸಾರಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಭವ್ಯ ರಥಯಾತ್ರೆ ಮಧುಗಿರಿಗೆ ಆಗಮಿಸುತ್ತಿರುವ ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ರಥಯಾತ್ರೆ ಬರ ಮಾಡಿ ಕೊಳ್ಳುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥ ಸಾಗಿ ಬಳಿಕ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಸಾರ್ವಜನಿಕವಾಗಿ ಸತ್ಸಂಗ ಏರ್ಪಡಿಸಿದ್ದು ಸ್ವಾಮಿ ತ್ಯಾಗೀಶ್ವರಾನಂದ, ಸ್ವಾಮಿ ಮಹಾವಾಕ್ಯನಂದ ಆಶೀರ್ವಚನ ನೀಡುವರು ಎಂದರು.
ಪೂರ್ವಭಾವಿ ಸಭೆಯಲ್ಲಿ ಡಿಡಿಪಿಐ ಆಂಜನಪ್ಪ, ಧಾರ್ಮಿಕ ಮುಖಂಡ ಎಂ.ಜಿ. ಶ್ರೀನಿವಾಸಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಡಿ.ಜಿ.ಶಂಕರನಾರಾಯಣಶೆಟ್ಟಿ, ತಾಲೂಕು ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಮುಖಂಡ ರಾಧೇಶ್ಯಾಮ್, ಶಕುಂತಲಾ ಗುಂಡುರಾವ್, ಗಾಯಿತ್ರಿ ನಾರಾಯಣ್, ಪುಷ್ಪಾವತಮ್ಮ ರತ್ನಯ್ಯ ಶೆಟ್ಟಿ ಹಾಗೂ ಇತರರು ಇದ್ದರು. ಅಮರಾವತಿ ದ್ರೇಹಚಾರ್ ಸ್ವಾಗತಿಸಿ, ವಂದಿಸಿದರು.