ಕೊಳವೆ ಬಾವಿ ಕೊರೆಸಿದರೂ ವಿದ್ಯುತ್ ಸಂಪರ್ಕ ಇಲ್ಲ
ಪಾವಗಡ: ಜಿಲ್ಲಾ ಎಸ್ಸಿ, ಎಸ್ಟಿ ನಿಗಮದಿಂದ ಕೊಳವೆ ಬಾವಿ ಕೊರೆಸಿ ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ 2012-13ನೇ ಸಾಲಿಗೆ ಸುಮಾರು 300 ಮಂದಿ ಎಸ್ಸಿ, ಎಸ್ಟಿ ಫಲಾನುಭವಿಗಳ ಜಮೀನುಗಳಲ್ಲಿ ಎಸ್ಸಿ- ಎಸ್ಟಿ ನಿಗಮದಿಂದ ಕೊಳವೆ ಬಾವಿ ಕೊರೆಸಿದ್ದು ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಂದು ಅವರು ದೂರಿದ್ದಾರೆ. ಸಂಬಂಧಪಟ್ಟ ನಿಗಮದ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಿಸಿದರೆ ಈ ಸಂಬಂಧ ಬೆಸ್ಕಾಂಗೆ ಹಣ ಪಾವತಿಸಿ 6 ತಿಂಗಳು ಕಳೆದಿದ್ದು ಫಲಾನುಭವಿಯ ಹೆಸರಿನಲ್ಲಿ ನಿಗಮದಿಂದ ಹಣ ಕಟ್ಟಿದ ಬಗ್ಗೆ ಬೆಸ್ಕಾಂನಿಂದ ರಸೀದಿ ಕೂಡ ಪಡೆಯಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂನಿಂದ ಗುತ್ತಿಗೆ ಪಡೆದ ಗುತ್ತಿಗೆದಾರರ ವಿಳಂಬ ಧೋರಣೆಯಿಂದ ತ್ವರಿತವಾಗಿ ಫಲಾನುಭವಿಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾದ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.