ಜಾಗೃತಿಗೆ ಜೆಡಿಎಸ್ ಕರಪತ್ರ
ಕ.ಪ್ರ.ವಾರ್ತೆ ತುಮಕೂರು ಜೂ. 8
ಡೆಂಘೀ ಜ್ವರದ ಬಗ್ಗೆ ಜನಜಾಗೃತಿ ಮೂಡಿಸಲು ಜಾತ್ಯತೀತ ಜನತಾದಳದ ನಗರ ಯುವ ಘಟಕ ನಗರದಲ್ಲಿ ಕರಪತ್ರ ಹಂಚಿಕೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಶನಿವಾರ ಟೌನ್ಹಾಲ್ ವೃತ್ತದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಅವರು ಕರಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 60 ಜನ ಶಂಕಿತ ಡೆಂಘೀಯಿಂದ ನರಳುತ್ತಿದ್ದಾರೆ. ಇವರಲ್ಲಿ 40 ಜನರಿಗೆ ಡೆಂಘೀ ಇರುವುದು ಖಚಿತವಾಗಿದೆ. ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ಡೆಂಘೀ ತಡೆಯಬಹುದಾದ ಕಾಯಿಲೆ ಈಡೀಸ್ ಎಂಬ ಸೊಳ್ಳೆಯಿಂದ ಬರುವ ಡೆಂಘೀ ನಿಯಂತ್ರಣಕ್ಕೆ ಸೊಳ್ಳೆ ನಾಶ ಅಗತ್ಯ. ಮನೆ ಸುತ್ತಮುತ್ತಲಿನ ನೀರು ಸಂಗ್ರಹಗಾರದಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಮಾಡುವ ಕಾರಣ ನೀರು ಸಂಗ್ರಹಣೆ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದರು. ಡೆಂಘೀ ಜ್ವರದ ಸ್ವರೂಪ ಹಾಗೂ ಅದರ ತಡೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಇರುವ ಕರಪತ್ರಗಳನ್ನು ವಿತರಿಸಿ ಸಾರ್ವಜನಿಕರಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆ ಎಂದರು. ನಗರ ಯುವ ಜೆಡಿಎಸ್ ಅಧ್ಯಕ್ಷ ಚಂದ್ರಬಾಬು, ನಗರಸಭಾ ಸದಸ್ಯ ಹನುಮಂತರಾಯಪ್ಪ, ಟಿ.ಹೆಚ್. ಬಾಲಕೃಷ್ಣ, ಮುಖಂಡರಾದ ಬೆಳ್ಳಿ ಲೋಕೇಶ್, ಮಧುಸೂದನ್, ಶಿವಪ್ರಕಾಶ್ ಬಳ್ಳುಕರಾಯ, ಅನ್ವರ್ ಪಾಷ, ರಾಣಿಚಂದ್ರಶೇಖರ್, ರಾಮಯ್ಯ, ರಮೇಶ್ ಭಾಗವಹಿಸಿದ್ದರು.