ಡಾಂಬರ್ ಕಳ್ಳರ ಮೇಲೆ ದಾಳಿ
ಕುಣಿಗಲ್: ಮಂಗಳೂರಿನಿಂದ ಬೆಂಗಳೂರಿಗೆ ಡಾಂಬರ್ ಸಾಗಿಸುವ ಲಾರಿ ಚಾಲಕರು, ಕೆಲ ಸ್ಥಳೀಯರೊಂದಿಗೆ ಅಕ್ರಮವಾಗಿ ಶಾಮೀಲಾಗಿ ಡಾಂಬರ್ ಕದಿಯುತ್ತಿದ್ದ ಜಾಲದ ಮೇಲೆ ಡಿವೈಎಸ್ಪಿ ನೇತೃತ್ವದ ತಂಡ ಶನಿವಾರ ಬೆಳಗಿನ ಜಾವ ದಾಳಿ ನಡೆಸಿ ಲಕ್ಷಾಂತರ ರುಪಾಯಿ ಮೌಲ್ಯದ ಡಾಂಬರ್, ವಾಹನ ವಶಪಡಿಸಿಕೊಳ್ಳಲಾಗಿದೆ.
ತಾಲೂಕಿನ ಗಡಿ ಭಾಗವಾದ ಅಮೃತೂರು ಪೊಲೀಸ್ ಠಾಣೆಗೆ ಸೇರಿದ ಗೊಂದಹಳ್ಳಿ ಸೇತುವೆ ಸಮೀಪದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಡಾಂಬರ್ ಸಾಗಿಸುವ ಟ್ಯಾಂಕರ್ ಲಾರಿ ಚಾಲಕರೊಂದಿಗೆ ಸ್ನೇಹ ಬೆಳೆಸಿ ಅಕ್ರಮವಾಗ ಡಾಂಬರ್ ಇಳಿಸಿಕೊಂಡು ಅದಕ್ಕೆ ಕೃತಕವಾಗಿ ಬೇರೆ ಕೆಮಿಕಲ್ ಸೇರಿಸಿ ಮಾರಾಟ ಮಾಡುತ್ತಿದ್ದ ಜಾಲದ ಬಗ್ಗೆ ದೊರೆತ ಸುಳಿವು ಅಧರಿಸಿದ ಅಮೃತೂರು ಪೊಲೀಸರು, ಡಿವೈಎಸ್ಪಿ ಉಮಾರಾಣಿ ನೇತೃತ್ವದಲ್ಲಿ ಶನಿವಾರ ಬೆಳಗಿನ ಜಾವ ದಾಳಿ ನಡೆಸಿದರು.
ಟ್ಯಾಂಕರ್ನಿಂದ ಅಕ್ರಮವಾಗಿ ಡಾಂಬರ್ ಇಳಿಸುತ್ತಿದ್ದವರ ಮೇಲೆ ದಿಢೀರ್ ದಾಳಿ ನಡೆಸಿದಾಗ ಪ್ರಮುಖ ಆರೋಪಿಗಳು ಪರಾರಿಯಾಗಿದ್ದಾರೆ.
20 ಲಕ್ಷ ಮೌಲ್ಯದ ಟ್ಯಾಂಕರ್, ಟ್ಯಾಂಕರ್ನಿಂದ ಕದ್ದ ಡಾಂಬರ್ ಸಾಗಿಸಲು ಬಳಸುತ್ತಿದ್ದ 25 ಡ್ರಂ ವಶಪಡಿಸಿಕೊಂಡಿದ್ದು, ಟ್ಯಾಂಕರ್ ಚಾಲಕ ಹಾಸನದ ಕುಮಾರ್ ಹಾಗೂ ಕ್ಲೀನರ್ ಮೋಹನ್ ಎಂಬುವವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.