ತುರುವೇಕೆರೆಯಲ್ಲಿ ಫಾಗಿಂಗ್
ಕ.ಪ್ರ.ವಾರ್ತೆ ತುರುವೇಕೆರೆ ಜೂ. 8
ಪಟ್ಟಣದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದ್ದು ಡೆಂಘೀ ಜ್ವರ ಕಾಣಿಸಿಕೊಳ್ಳಬಹುದು ಎಂಬ ಭಯದಿಂದ ಪಟ್ಟಣದ ಹಲವಾರು ವಾರ್ಡ್ಗಳಿಗೆ ಸೊಳ್ಳೆ ನಿಯಂತ್ರಣ ಮಾಡಲು ಫಾಗಿಂಗ್ ಕಾರ್ಯಾಚರಣೆಯನ್ನು ಮಾಡಲಾಯಿತು.
ಸುಬ್ರಹ್ಮಣ್ಯ ನಗರ ಹಾಗೂ ಗಾಂಧಿನಗರದ ಬಹುಪಾಲು ಚರಂಡಿಗಳಲ್ಲಿ ನೀರು ಹಾಗೂ ಕಲ್ಮಷಗಳು ಮುಂದಕ್ಕೆ ಸರಾಗಿ ಹೋಗಲು ಸಾಧ್ಯವಾಗದೇ ತಟಸ್ಥಗೊಂಡಿವೆ. ಎಷ್ಟೇ ಬಾರಿ ಚರಂಡಿಯನ್ನು ಸ್ಪಚ್ಛಗೊಳಿಸಿದರೂ ಕಸಗಳು ಪುನಾ ಶೇಖರಗೊಂಡ ಪರಿಣಾಮ ಸೊಳ್ಳೆಗಳ ಆವಾಸ ಸ್ಥಾನವಾಗಿದೆ. ಇದರಿಂದಾಗಿ ಹಲವಾರು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸೊಳ್ಳೆ ನಿಯಂತ್ರಣ ಮಾಡುವುದು ಅತ್ಯಗತ್ಯವಾಗಿದೆ ಎಂದು ತಾಲೂಕು ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಪಟ್ಟಣದ 13ನೇ ವಾರ್ಡ್ನಲ್ಲಿ ಫಾಗಿಂಗ್ ಮಾಡಲಾಯಿತು. ಪಟ್ಟಣ ಪಂಚಾಯ್ತಿಯ ನೂತನ ಸದಸ್ಯ ಕೆ.ಟಿ.ಶಿವಶಂಕರ್ ಮಾರ್ಗದರ್ಶನದಲ್ಲಿ ಮೇಸ್ತ್ರಿ ಮಲ್ಲೇಶ್ ಹಾಗೂ ಸಿಬ್ಬಂದಿ ಬಹುಪಾಲು ಬೀದಿಗಳಲ್ಲಿ ಸಿಂಪಡಣೆ ಕಾರ್ಯ ಮಾಡಿದರು. ಪಟ್ಟಣದ ಎಲ್ಲಾ ಮನೆಗಳಲ್ಲಿ ಮನೆಯ ನೀರಿನ ತೊಟ್ಟಿಗಳನ್ನು ಶುಧ್ಧೀಕರಣ ಮಾಡಿಕೊಳ್ಳುವಂತೆ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಕುಮಾರ್ ಪಟ್ಟಣದ ನಾಗರಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.