ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ 346 ಕೋಟಿ ಸಾಲ
ಕ.ಪ್ರ.ವಾರ್ತೆ ತುಮಕೂರು ಜೂ. 8
ರಾಷ್ಟ್ರೀಕೃತ ಬ್ಯಾಂಕ್ಗಳ ಸಹಕಾರದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ವ ಸಹಾಯ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಈ ಮೂಲಕ ಜನತೆಗೆ ಸಹಾಯ ಮಾಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ಹಾಮಾಭಿವೃದ್ಧಿ ಯೋಜನೆಯ ತುಮಕೂರು ವಿಭಾಗದ ಮುಖ್ಯಸ್ಥರಾದ ಗಂಗಾಧರ ರೈ, ಶ್ರೀಹರಿ ತಿಳಿಸಿದರು.
ತುಮಕೂರಿನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 346 ಕೋಟಿ ಸಾಲ ನೀಡಲಾಗಿದೆ. ಯಾವುದೇ ಸಂಘ ರಚನೆಯಾಗಿ 3 ತಿಂಗಳ ಅವಧಿಯಲ್ಲಿ 6 ತಿಂಗಳ ಅವಧಿಗೆ 50 ಸಾವಿರ ನಂತರ 1 ಲಕ್ಷದಿಂದ 3 ಲಕ್ಷವರೆಗೆ ಸಾಲ ಪಡೆಯಬಹುದಾಗಿದೆ. ಸ್ವಸಹಾಯ ಸಂಘಗಳ ನಿಯಮಗಳ ಪ್ರಕಾರ ಬ್ಯಾಂಕ್ ಬಡ್ಡಿ ದರದಂತೆ ಸಾಲ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸ್ವಯಂ ಉದ್ಯೋಗ, ಸೇರಿದಂತೆ ಕೃಷಿ, ವ್ಯಾಪಾರ, ಉದ್ದಿಮೆ, ಬದಲಿ ಇಂಧನ ಕಾರ್ಯಕ್ರಮ, ಗ್ರಾಮ ನೈರ್ಮಲ್ಯ, ಗೃಹ ನಿರ್ಮಾಣ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಸಾಲ ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿಗಳಲ್ಲಿ, ಪ್ಲೋರೈಡ್ ಘಟಕಗಳನ್ನು ಸ್ಥಾಪಿಸಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದರು.
ತುಮಕೂರು ಜಿಲ್ಲೆಯ 231 ಹಳ್ಳಿಗಳಲ್ಲಿ ಪ್ಲೋರೈಡ್ ನೀರಿನ ಸಮಸ್ಯೆಯಿದ್ದು, ಶುದ್ಧ ಗಂಗಾ ಯೋಜನೆಯಡಿ ಪ್ಲೋರೈಡ್ ಘಟಕವೊಂದಕ್ಕೆ 10 ಲಕ್ಷ ವೆಚ್ಚವಾಗಲಿದೆ ಎಂದರು.