ನೂತನ ಮನೆ ನಿರ್ಮಾಣಕ್ಕೆ ಕ್ರಮ
ಪಾವಗಡ: ಭಾರೀ ಮಳೆಯಿಂದ ಓಬಳಾಪುರ ಗ್ರಾಮದ ಕಾಲೋನಿಯ ಬಡವರ ಅನೇಕ ಮನೆಗಳು ಜಲಾವೃತವಾಗಿ ಸದಾ ನಷ್ಟಕ್ಕಿಡಾಗುವ ಹಿನ್ನೆಲೆಯಲ್ಲಿ ಜಮೀನು ಖರೀದಿಸಿ ನೂತನ ಮನೆಗಳು ನಿರ್ಮಿಸುವ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಓಬಳಾಪುರ ಭಾರೀ ಜನಸಂಖ್ಯೆಯುಳ್ಳ ದೊಡ್ಡ ಗ್ರಾಮವಾಗಿದ್ದು ಪ್ರತಿವರ್ಷ ಗ್ರಾಮದಲ್ಲಿ ಬೀಳುವ ಮಳೆ ನೀರು ಕಾಲೋನಿಯ ತಗ್ಗು ಪ್ರದೇಶಕ್ಕೆ ನುಗ್ಗುವುದರಿಂದ ಸಂಸ್ಯೆಯಾಗುತ್ತಿದೆ. ಈಗಾಗಲೇ ಓಬಳಾಪುರ ಗ್ರಾಮದ ದಲಿತ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದರು. ಹರಿಯುವ ನೀರಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿದ್ದ ರೈತರನ್ನು ಭೇಟಿ ಮಾಡಿ ತೆರವುಗೊಳಿಸಿ ಬಡವರ ಮನೆಗಳಿಗೆ ರಕ್ಷಣೆ ಕಲ್ಪಿಸಲು ಮನವಿ ಮಾಡಲಾಗಿದೆ. ಸರಗವಾಗಿ ಮಳೆ ನೀರು ಹರಿಯಲು ಪರ್ಯಾಯ ಚರಂಡಿ ವ್ಯವಸ್ಥೆಗೆ ತಾಪಂನಿಂದ 6 ಲಕ್ಷ ಹಣ ಮಂಜೂರಾತಿಗೆ ಶಿಫಾರಸು ಮಾಡಲಾಗಿದೆ ಎಂದರು.