ಪರಮಶಿವಯ್ಯ ವರದಿ ಜಾರಿಗೆ ಜಯಚಂದ್ರ ನಿರುತ್ಸಾಹ
ಅದಲಗೆರೆ ನಾಗೇಂದ್ರಕುಮಾರ್
ಕ.ಪ್ರ.ವಾರ್ತೆ ತುಮಕೂರು ಜೂ. 8
9 ಜಿಲ್ಲೆಗಳ ಸುಮಾರು 10 ಸಾವಿರ ಕೆರೆಗಳಿಗೆ ಕುಡಿಯುವ ನೀರೊದಗಿಸುವ ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ವರದಿ ಜಾರಿಗೆ (ವಾಟರ್ ಗ್ರಿಡ್) ಕಾಂಗ್ರೆಸ್ ಹಾಗೂ ಬಿಜೆಪಿಯ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸಾಹ ತೋರಿ ಒಪ್ಪಿಗೆ ಸೂಚಿಸಿದ್ದರೆ, ತುಮಕೂರು ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮಾತ್ರ ನಿರಾಸಕ್ತಿ ತೋರಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಹಾಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಹಾಗೂ ಹಾಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಉತ್ಸುಕವಾಗಿದ್ದರೆ, ತುಮಕೂರು ಜಿಲ್ಲೆಯ ರಾಜಕಾರಣಿಗಳು (ತುಮಕೂರು ಎಂಪಿ ಜಿಎಸ್ಬಿ, ಮಧುಗಿರಿ ಶಾಸಕ ಕೆಎನ್ಆರ್ ಬಿಟ್ಟು) ಆಸಕ್ತಿ ತೋರದೇ ಇರುವುದು ಈಗಾಗಲೇ ಗೋಚರಿಸಿದೆ. ಈಗ ಮತ್ತೊಮ್ಮೆ ಅದೇ ಧೋರಣೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರದ್ದು.
ಶನಿವಾರ ಜಯಚಂದ್ರ ಅವರು ತುಮಕೂರಿಗೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ವೇಳೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಪರಮಶಿವಯ್ಯ ವರದಿ ಜಾರಿ ಕುರಿತು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ, ಅದೊಂದು ನೆನೆಗುದಿಗೆ ಬಿದ್ದಿರುವ 78 ನೀರಾವರಿ ಯೋಜನೆಗಳಲ್ಲಿ ಸೇರಿ ಹೋಗಿದೆ. ಅದನ್ನು ಪರಿಗಣಿಸುವ ಕುರಿತು ಚಿಂತಿಸಲಾಗುವುದು ಎಂದು ಹಾರಿಕೆ ಉತ್ತರ ನೀಡುವ ಮೂಲಕ ತಮಗೂ ಕೂಡ ಪರಮಶಿವಯ್ಯ ವರದಿ ಬಗ್ಗೆ ನಿರಾಸಕ್ತಿ ಇರುವುದನ್ನು ತೋರ್ಪಡಿಸಿಕೊಂಡರು. ಜತೆಗೆ ಪರಮಶಿವಯ್ಯ ವರದಿ ಇನ್ನೂ ವೈಜ್ಞಾನಿಕವಾಗಿ ಪರಾಮರ್ಶೆಗೆ ಒಳಪಟ್ಟಿಲ್ಲ, ಸಾಬೀತಾಗಿಲ್ಲ ಎಂದು ಷರಾ ಬರೆದರು.
ಎಸ್.ಎಂ. ಕೃಷ್ಣ ಒಪ್ಪಿಗೆ: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ತುಮಕೂರಿನ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಾಟಾಗಿದ್ದ ಕಾರ್ಯಕ್ರಮವೊಂದರಲ್ಲಿ ಪರಮಶಿವಯ್ಯ ವರದಿ ಜಾರಿ ಕುರಿತು ಭರವಸೆ ನೀಡಿದ್ದರು. ಅದರಂತೆ ಯೋಜನೆ ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.
ಬಿಎಸ್ವೈ, ಶೆಟ್ಟರ್ ಬೆಂಬಲ: ಅದೇ ರೀತಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದ ವೇಳೆ ಪರಮಶಿವಯ್ಯ ವರದಿ ಜಾರಿಗೆ ಬಜೆಟ್ನಲ್ಲಿ ಸುಮಾರು 1000 ಕೋಟಿ ಹಣವನ್ನು ಬಾಂಡ್ ಮೂಲಕ ಸಂಗ್ರಹಿಸಲು ಘೋಷಿಸಿದ್ದರು. ಕಳೆದ ಫೆಬ್ರವರಿಯಲ್ಲಿ ಅಂದಿನ ಸಿಎಂ ಜಗದೀಶ ಶೆಟ್ಟರ್ ಮಂಡಿಸಿದ ಬಜೆಟ್ನಲ್ಲಿ ಪರಮಶಿವಯ್ಯ ವರದಿ ಬಿಟ್ಟು ಹೋಗಿದ್ದನ್ನು ತುಮಕೂರು ಸಂಸದ ಜಿ.ಎಸ್. ಬಸವರಾಜ್ ನೇತೃತ್ವದಲ್ಲಿ ವಿವಿಧ ಸಂಘ, ಸಂಸ್ಥೆಗಳು 3 ದಿನಗಳ ಕಾಲ ತುಮಕೂರಿನ ಟೌನ್ಹಾಲ್ನಲ್ಲಿ ಪ್ರತಿಭಟನೆ ನಡೆಸಿದ್ದವು. ನಂತರ ಎಚ್ಚೆತ್ತುಕೊಂಡ ಬಿಜೆಪಿ ಸರ್ಕಾರ ಪೂರಕ ಬಜೆಟ್ನಲ್ಲಿ ಪರಮಶಿವಯ್ಯ ವರದಿ ಜಾರಿಗೆ ಬದ್ಧವಾಗಿರುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಕೈ ಬಿಡಲಾಗಿತ್ತು.
ಮೊಯ್ಲಿ ಬದ್ಧ: ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಚಾರಕ್ಕೆ ಬಂದಿದ್ದ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪರಮಶಿವಯ್ಯ ವರದಿ ಜಾರಿಗೆ ಕಾಂಗ್ರೆಸ್ ಬದ್ಧವಾಗಿದ್ದು, ತಾವು ಯೋಜನೆ ಬೆಂಬಲಿಸುವುದಾಗಿ ಘೋಷಿಸಿದ್ದರು. ಈ ಯೋಜನೆಗೆ ಮಂಗಳೂರು ಕಡೆಯ ಜನರಿಂದ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದರು.
ಜೂ.1ರಂದು ಸಿದ್ದು, ಮೊಯ್ಲಿ ಒಪ್ಪಿಗೆ: ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಸಿಎಂ ಸಿದ್ದರಾಮಯ್ಯನವರೂ ಸಹ ಜೂ.1ರಂದು ತುಮಕೂರಿನಲ್ಲಿ ನಡೆದ ಆಧಾರ್ ಎಲ್ಪಿಜಿ ಸಬ್ಸಿಡಿ ಕಾರ್ಯಕ್ರಮದಲ್ಲಿ ಪರಮಶಿವಯ್ಯ ವರದಿ ಜಾರಿಗೆ, ಬಯಲು ಸೀಮೆ ಪ್ರದೇಶಗಳಿಗೆ ನೀರು ಹರಿಸುವ ಕುರಿತು ಭರವಸೆಯ ಮಾತುಗಳನ್ನಾಡಿದ್ದರು. ಆದರೆ ಅಂದು ಜಿಲ್ಲಾ ಕಾಂಗ್ರೆಸ್ ಸಿಎಂಗೆ ನೀಡಿದ ಮನವಿ ಪತ್ರದಲ್ಲಿ ಎತ್ತಿನಹೊಳೆ ಜಾರಿಗೆ ಆದ್ಯತೆ ನೀಡುವಂತೆ ಕೋರಿತ್ತು. ಜಯಚಂದ್ರ ಸಹ ಎತ್ತಿನಹೊಳೆ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿರುವುದಾಗಿ ತಿಳಿಸಿ, ಪರಮಶಿವಯ್ಯ ವರದಿ ಜಾರಿಗೆ ನಿರುತ್ಸಾಹ ತೋರಿದ್ದಾರೆ. ಒಟ್ಟಾರೆ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಎತ್ತಿನಹೊಳೆ ಯೋಜನೆ ಜಾರಿಗೆ ಜೋತು ಬಿದ್ದು, ಪರಮಶಿವಯ್ಯ ವರದಿ (ವಾಟರ್ ಗ್ರಿಡ್) ಜಾರಿ ಕುರಿತು ಚಕಾರವೆತ್ತುತ್ತಿಲ್ಲ.
ಗುರುವಿಗೆ ತಿರುಮಂತ್ರ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪರಮಶಿವಯ್ಯ ವರದಿ ಜಾರಿಗೆ ಬದ್ಧವಾಗಿದ್ದಾರೆ. ಆದರೆ ಎಸ್.ಎಂ. ಕೃಷ್ಣರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮಾತ್ರ ಪರಮಶಿವಯ್ಯ ವರದಿ ಜಾರಿಗೆ ನಿರುತ್ಸಾಹ ತೋರಿದ್ದು, ಗುರುವಿಗೆ ತಿರುಮಂತ್ರ ಹಾಕುವ ಹಾದಿಯಲ್ಲಿದ್ದಾರೆ.
ಜಿಎಸ್ಬಿ ಏಕಾಂಗಿ ಹೋರಾಟ, ಕೆಎನ್ಆರ್ ಬೆಂಬಲ: ಪರಮಶಿವಯ್ಯ ವರದಿ ಜಾರಿಗೆ (ವಾಟರ್ಗ್ರಿಡ್) ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿರುವ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ಅವರದ್ದು ಒಂಟಿ ಧ್ವನಿ. ಏಕಾಂಗಿ ಹೋರಾಟ. ಅಧಿಕಾರದಲ್ಲಿರಲಿ, ಬಿಡಲಿ, ಕಾಂಗ್ರೆಸ್ನಲ್ಲಿರಲಿ, ಬಿಜೆಪಿಯಲ್ಲಿರಲಿ ಜಿ.ಎಸ್. ಬಸವರಾಜ್ ಪರಮಶಿವಯ್ಯ ವರದಿ ಜಾರಿಗೆ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈ ಹೋರಾಟಕ್ಕೆ ಪಕ್ಷಾತೀತ ಬೆಂಬಲ ಪಡೆಯುವ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ಶಾಸಕರಾಗಿ ಆಯ್ಕೆಯಾಗಿರುವ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೆ.ಎನ್. ರಾಜಣ್ಣ ಅವರು ಜಿ.ಎಸ್. ಬಸವರಾಜ್ ಅವರ ಕುಡಿಯುವ ನೀರಿನ ಹೋರಾಟಕ್ಕೆ ತಮ್ಮ ಬೆಂಬಲವಿರುವುದಾಗಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಘೋಷಿಸುವ ಮೂಲಕ ಜಿಎಸ್ಬಿ ಜತೆಗೆ ಇನ್ನೊಂದು ಧ್ವನಿಯನ್ನು ಸೇರಿಸುವ ಆಶಾಕಿರಣವಾಗಿ ಗೋಚರಿಸಿದ್ದಾರೆ.