ಮನುಷ್ಯನ ದುರಾಸೆಯಿಂದ ಪರಿಸರ ನಾಶ: ಮೋಹನ್
ಕ.ಪ್ರ.ವಾರ್ತೆ ಮಧುಗಿರಿ ಜೂ. 8
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಕೊಟಗಾರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಆಚರಿಸಿದರು.
ಶಾಲೆಯ ಜೀವ ವಿಜ್ಞಾನ ಶಿಕ್ಷಕ ಮೋಹನ್ ಮಾತನಾಡಿ, ಇಂದಿನ ಆಧುನಿಕ ವಿಜ್ಞಾನ ಜಗತ್ತಿನಲ್ಲಿ ಮನುಷ್ಯರ ದುರಾಸೆ ಹಾಗೂ ಆಡಂಬರದ ಜೀವನ ಶೈಲಿಯಿಂದಾಗಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಅನೇಕ ಜೀವ ವೈವಿಧ್ಯಗಳು, ಜೈವಿಕ ಪ್ರಬೇಧಗಳು ನಾಶವಾಗುತ್ತಿವೆ. ಜೀವ ಸಂಕುಲದ ಉಳಿವು ಮತ್ತು ಸಂರಕ್ಷಣೆಗೆ ವಿದ್ಯಾರ್ಥಿಗಳು ಮಹತ್ತರ ಪಾತ್ರ ವಹಿಸುವ ನಿಟ್ಟಿನಲ್ಲಿ ತಾವೂ ವಾಸಿಸುವ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಮರ, ಗಿಡಗಳನ್ನು ಬೆಳೆಸಬೇಕು ಎಂದರು.
ವಿಜ್ಞಾನ ಶಿಕ್ಷಕ ರಾಮಚಂದ್ರಯ್ಯ ಮಾತನಾಡಿ, ಪರಿಸರ ದಿನಾಚರಣೆ ಯೋಚಿಸಿ-ಸೇವಿಸು-ಉಳಿಸು 2013ರ ಧ್ಯೇಯ ವಾಕ್ಯ. ಇದರ ಮಹತ್ವ ಮತ್ತು ಆಹಾರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣಪ್ಪ ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಅಗತ್ಯವಾಗಿದ್ದು ಈ ವಿಚಾರದಲ್ಲಿ ವಿದ್ಯಾರ್ಥಿಗಳು ನಿರ್ಣಾಯಕ ಪಾತ್ರ ವಹಿಸಬೇಕು ಎಂದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದಿರು. ಶಿಕ್ಷಕ ಮಲ್ಲಿಕ್ ರೆಹಮಾನ್ ಸ್ವಾಗತಿಸಿ, ಗೋವಿಂದರಾಜು ನಿರೂಪಿಸಿ, ಪ್ರಾಣೇಶ್ ವಂದಿಸಿದರು.