ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಲಾಖಾ ಪ್ರಗತಿ ವರದಿ ನಿಗದಿಪಡಿಸಿದ ವೇಳೆಗೆ ತಲುಪಿಸಿ

Rashmi Kasaragodu
Updated On : 10 Jun 2013, 12:25 pm

ಕ.ಪ್ರ.ವಾರ್ತೆ  ಶಿರಾ  ಜೂ. 9
ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ಪ್ರಗತಿ ವರದಿಗಳನ್ನು ನಿಗದಿಪಡಿಸಿದ ದಿನಾಂಕದೊಳಗೆ ತಾ.ಪಂ. ಕಾರ್ಯಾಲಯಕ್ಕೆ ತಲುಪಿಸಬೇಕು ಇಲ್ಲವಾದಲ್ಲಿ ಮುಂದಾಗುವ ಯಾವುದೇ ಅನಾಹುತಗಳಿಗೆ ಇಲಾಖಾ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೇದಮೂರ್ತಿ ಎಚ್ಚರಿಕೆ ನೀಡಿದರು.
ಅವರು ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಕೆ.ಡಿ.ಪಿ. ಹಾಗೂ ಸಾಮಾನ್ಯ ಸಭೆಗಳಿಗೆ 10 ದಿನಗಳ ಮುಂಚೆ ಎಲ್ಲಾ ಸದಸ್ಯರಿಗೆ ಇಲಾಖಾ ಪ್ರಗತಿ ವರದಿಗಳನ್ನು ತಲುಪುವಂತೆ ನಿಯಮವಿದೆ. ಇದು ಸದಸ್ಯರು ಇಲಾಖಾ ಕಾರ್ಯಗಳ ಬಗ್ಗೆ ತಿಳಿದುಕೊಂಡು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಅನುಕೂಲವಾಗುತ್ತದೆ. ಆದರೆ ಕೆಲವೊಂದು ಇಲಾಖಾ ಅಧಿಕಾರಿಗಳು ನಿಗದಿತ ದಿನಾಂಕದಲ್ಲಿ ಪ್ರಗತಿ ವರದಿಗಳನ್ನು ನಮಗೆ ನೀಡುತ್ತಿಲ್ಲ. ದೂರವಾಣಿ ಕರೆ ಮಾಡಿ ಒತ್ತಾಯಿಸಬೇಕಾಗಿದೆ. ಇದರಿಂದ ನಾವು ಸದಸ್ಯರಿಗೆ ಸರಿಯಾದ ಸಮಯಕ್ಕೆ ವರದಿಗಳನ್ನು ತಲುಪಿಸಲು ಆಗುತ್ತಿಲ್ಲ ಇದನ್ನು ಅನೇಕ ಸದಸ್ಯರು ಆಕ್ಷೇಪಿಸಿದ್ದು ಇನ್ನೂ ಮುಂದೆ ನಿಗದಿಗೊಳಿಸಿದ ದಿನಾಂಕದೊಳಗೆ ಯಾವ ಇಲಾಖೆಯವರು ಇಲಾಖಾ ವರದಿಗಳನ್ನು ಸಲ್ಲಿಸುತ್ತಾರೋ ಅಷ್ಟನ್ನೇ ಪುಸ್ತಕ ಮಾಡಿ ಸದಸ್ಯರು ಮತ್ತು ಸಂಬಂಧಪಟ್ಟವರಿಗೆ ನೀಡುತ್ತೇವೆ. ಒಂದು ವೇಳೆ ವರದಿಗಳನ್ನು ನಿಗದಿಗೊಳಿಸಿದ ದಿನಾಂಕದಲ್ಲಿ ನೀಡದೆ ಇರುವ ಇಲಾಖಾ ಅಧಿಕಾರಿಗಳು ಸಮಸ್ಯೆಗೆ ಅವರೇ ಜವಾಬ್ದಾರರಾಗುತ್ತಾರೆ ಹಾಗೂ ಮುಂದಾಗುವ ಪರಿಣಾಮಗಳನ್ನು ಅವರೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯುತ್ ಬಿಲ್ ಕಡ್ಡಾಯ: ಪಡಿತರ ಚೀಟಿಗಾಗಿ ಮನೆ ಖಾತೆ ನಂ. ಮತ್ತು ವಿದ್ಯುತ್ ಬಿಲ್ಗಳನ್ನು ಕಡ್ಡಾಯಗೊಳಿಸಿದ್ದು ಕೆಲವೊಂದು ಮನೆಗಳಲ್ಲಿ ಮೂರು ನಾಲ್ಕು ಕುಟುಂಬಗಳು ವಾಸಿಸುತ್ತಿದ್ದು ಒಂದೇ ಖಾತೆ ನಂ. ಮತ್ತು ವಿದ್ಯುತ್ ಸಂಪರ್ಕ ಹೊಂದಿರುತ್ತವೆ. ಹಾಗೂ ಕೆಲವೊಂದು ಖಾತೆಗಳೆ ಆಗಿರುವುದಿಲ್ಲ. ಇಂತಹ ಸಮಸ್ಯೆಗಳು ಕಂಡುಬರುತ್ತಿದ್ದು ಪಡಿತರ ಚೀಟಿಗಾಗಿ ಜನ ತಾಲೂಕು ಕಚೇರಿಗೆ ಬೆಳಿಗ್ಗೆಯೇ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬರಬೇಕಾಗಿದೆ. ಸ್ಥಳೀಯ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಸ್ಥಳೀಯವಾಗೇ ಪಡಿತರ ಚೀಟಿ ವಿತರಿಸುವ ವ್ಯವಸ್ಥೆ ಮಾಡುವಂತೆ ಉಪಾಧ್ಯಕ್ಷ ಸಿ.ಎಸ್.ಉದಯಶಂಕರ್ ತಹಸೀಲ್ದಾರ್ಗೆ ಹೇಳಿದರು.
ಮಿಂಚು ಸಂಚಾರ: ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಶಿಕ್ಷಣಾಧಿಕಾರಿ ಎಸ್.ರಾಜ್ಕುಮಾರ್ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿ ತಾಲೂಕಿನಾದ್ಯಂತ ಕಳೆದ ಮೇ 30 ರಿಂದ ಶಾಲಾ ತರಗತಿಗಳು ಆರಂಭಗೊಂಡಿದ್ದು ಅಂದಿನಿಂದ ಜೂನ್ 8 ರವರೆಗೆ ಪ್ರತಿದಿನ ಒಂದು ಹೋಬಳಿಯ ಶಾಲೆಗಳಿಗೆ ನನ್ನನ್ನು ಸೇರಿದಂತೆ 52 ಜನರ ತಂಡ ಮಿಂಚು ಸಂಚಾರ ಎಂಬ ಕಾರ್ಯಕ್ರಮದಡಿ ಭೇಟಿ ನೀಡಿ ಅಲ್ಲಿನ ಶಾಲೆಗಳ ಭೌತಿಕ ಪರಿಸರ ಸಮಸ್ಯೆಗಳು ಇವುಗಳ ಬಗ್ಗೆ ಅಧ್ಯಯನ ಮಾಡಿ ಎಲ್ಲಾ ಶಾಲೆಗಳಿಗೂ ಭೇಟಿ ನೀಡಿದ್ದವರು ಸಂಜೆ 4.30 ಕ್ಕೆ ಸಭೆ ಸೇರಿ ಚರ್ಚೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಇದರಿಂದ ಶೈಕ್ಷಣಿಕ ಮಟ್ಟ ಸುಧಾರಣೆಯಾಗುತ್ತದೆ ಎಂದು ವಿವರಿಸಿದರು. ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಲು ಹೆಚ್ಚಿನ ಡೊನೇಷನ್ ಕೇಳುತ್ತಿದ್ದಾರೆಂದು ಜನ ತಮ್ಮ ಬಳಿ ದೂರುತ್ತಿದ್ದಾರೆ. ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ ಸೂಚಿಸಿದರು.
ಕಳಪೆ ಗುಣಮಟ್ಟ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ವರದಿಯ ಬಗ್ಗೆ ಚರ್ಚೆ ನಡೆದು ಮಕ್ಕಳಿಗೆ ಸರಬರಾಜಾಗುತ್ತಿರುವ ಗೋಧಿ ನುಚ್ಚು ಕಳಪೆ ಗುಣಮಟ್ಟದಿಂದ ಕೂಡಿದ್ದು ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರು ಸರಿಯಾಗಿ ಹಾಜರಿರುವುದಿಲ್ಲ ಎಂಬ ಬಗ್ಗೆ ಜನ ಹೇಳುತ್ತಿದ್ದು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಸೂಚಿಸಿದರು.
ಇದಕ್ಕೆ ಸಮಜಾಯಿಷಿ ನೀಡಿ ಅಂಗನವಾಡಿ ಕಾರ್ಯಕರ್ತೆಯರನ್ನು ಜನಗಣತಿ, ಭಾಗ್ಯಲಕ್ಷ್ಮಿ ಸೇರಿದಂತೆ ಹಲವು ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದ್ದು ಅದರಿಂದ ಕೆಲವೊಂದು ವೇಳೆ ಅವರು ಹಾಜರಿರುವುದಿಲ್ಲ. ಆದರೂ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಲಾಗುವುದು ಎಂದರು.
ಬಾಂಡ್ಗಳ ವಿತರಣೆ: 2006-07 ರಿಂದ 2013-14 ನೇ ಸಾಲಿನವರೆಗೂ 10589 ಭಾಗ್ಯಲಕ್ಷ್ಮಿ ಬಾಂಡ್ಗೆ ತಾಲೂಕಿನಾದ್ಯಂತ ಅರ್ಜಿ ಸಲ್ಲಿಕೆಯಾಗಿದ್ದು ಇವುಗಳಲ್ಲಿ 9350 ಫಲಾನುಭವಿಗಳಿಗೆ ಈಗಾಗಲೇ ಬಾಂಡ್ಗಳನ್ನು ವಿತರಿಸಲಾಗಿದೆ. ಇನ್ನೂ 1239 ಬಾಂಡ್ಗಳು ಸರ್ಕಾರದಿಂದ ಬರಬೇಕಾಗಿದೆ ಎಂದು ತಿಳಿಸಿದರು. ಇದಕ್ಕೆ ಉಪಾಧ್ಯಕ್ಷ ಸಿ.ಎಸ್.ಉದಯಶಂಕರ್ ತಕ್ಷಣ ಉಳಿದ ಬಾಂಡ್ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಡೆಂಘೀ ಜ್ವರ ಪತ್ತೆ: ಆರೋಗ್ಯ ಇಲಾಖೆಯ ಬಗ್ಗೆ ಚರ್ಚೆ ನಡೆಸಲಾಗಿ ತಾಲೂಕಿನಲ್ಲಿ ಡೆಂಘೀ ಜ್ವರ ಕೆಲವರಲ್ಲಿ ಪತ್ತೆಯಾಗಿದ್ದು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ತಿಮ್ಮರಾಜು ತಿಳಿಸಿದರು. ಈಗಾಗಲೇ ಎಲ್ಲಾ ಗ್ರಾಮಗಳಲ್ಲೂ ಸ್ವಚ್ಛತೆ ಕಾಪಾಡಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಡೆಂಘೀ ಜ್ವರ ಲಕ್ಷಣ ಕಂಡು ಬರುವ ವ್ಯಕ್ತಿಗಳ ರಕ್ತ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಈ ಸಂಬಂಧ ಬರುವ ಜೂ 10 ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ಸಂಬಂಧಪಟ್ಟವರ ಸಭೆ ಕರೆಯಲಾಗಿದೆ ಎಂದು ವಿವರಿಸಿದರು.  ಬೆಸ್ಕಾಂ ಇಲಾಖೆಯು ಕುಡಿಯುವ ನೀರು ಸೇರಿದಂತೆ ಸರ್ಕಾರದ ವಿವಿಧ ಯೋಜನೆಯಡಿ ನೀಡಿರುವ ಸಂಪರ್ಕಗಳ ಬಗ್ಗೆ ವಿಷಯ ಚರ್ಚೆಗೆ ಬಂದಾಗ ಉಪಾಧ್ಯಕ್ಷ ಸಿ.ಎಸ್.ಉದಯಶಂಕರ್ ಖಾರವಾಗಿ ಪ್ರತಿಕ್ರಿಯಿಸಿ ಕೇವಲ ಸಂಖ್ಯೆಗಳಲ್ಲಿ ವರದಿ ಸಲ್ಲಿಸುವುದು ಬೇಡ. ಯಾವಾಗ ಅರ್ಜಿ ಬಂದಿತ್ತು, ಯಾವಾಗ ಎಲ್ಲೆಲ್ಲಿ ಸಂಪರ್ಕ ನೀಡಿದ್ದೀರಿ ಎನ್ನುವುದನ್ನು ವಿವರವಾಗಿ ಇನ್ನು ಮುಂದೆ ವರದಿ ನೀಡಿ ಎಂದು ಸೂಚಿಸಿದರು. ಸಭೆಯಲ್ಲಿ ಇನ್ನೂ ವಿವಿಧ ಇಲಾಖಾ ಪ್ರಗತಿ ವರದಿಗಳನ್ನು ಪರಿಶೀಲಿಸಿ ಚರ್ಚೆ ನಡೆಸಲಾಯಿತು.  ತಹಸೀಲ್ದಾರ್  ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement