ನಾಗರಾಜ್ರಿಂದ 2 ಸಾವಿರಕ್ಕೂ ಅಧಿಕ ಜಾನಪದ ಕಾರ್ಯಕ್ರಮ
ಆಲೂರು: ಇಂದು ಯುವ ಪೀಳಿಗೆಯ ಕೆಲವರು ಸೋಮಾರಿಗಳಂತೆ ಓಡಾಡಿಕೊಂಡು ಕಾಲ ಕಳೆಯುವವರ ಮಧ್ಯೆ ಬಹುಮುಖ ಪ್ರತಿಭೆಯ ವ್ಯಕ್ತಿಯೊಬ್ಬರಿದ್ದಾರೆ, ಅವರೇ ನಾಗರಾಜ್ ಆಲೂರ್. ಅವರ ಸಾಧನೆಯನ್ನು ಗುರುತಿಸಿ ಆಲೂರು ತಾಲೂಕು 4 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗಿದೆ. ಹೀಗೆ ಮಾಡುವ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತನ್ನ ಗೌರವ ಹೆಚ್ಚಿಸಿಕೊಂಡಿದೆ ಎಂದೆ ಹೇಳಬಹುದು.
ನಾಗರಾಜ್ ಜಿಲ್ಲೆಯ ಕಣಕಟ್ಟೆ ಗ್ರಾಮದ ನಾರಾಣಪ್ಪ - ನಂಜಮ್ಮ ದಂಪತಿ ಪುತ್ರರು. 4-1-1936 ರಲ್ಲಿ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಜನನ. ಎಸ್ಎಸ್ಎಲ್ಸಿ ವರೆಗೆ ವಿಧ್ಯಾಭ್ಯಾಸ ಮಾಡಿದ ಇವರು 21ನೇ ವಯಸ್ಸಿಗೆ ಅಂದರೆ 1957 ರಲ್ಲಿ ವಿವಾಹವಾದರು. ಎರಡು ಗಂಡು ಹಾಗು ಒಂದು ಹೆಣ್ಣು ಸೇರಿದಂತೆ 3 ಮಕ್ಕಳಿದ್ದಾರೆ.ಊರಿನಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದು 1973 ರಲ್ಲಿ ಆಲೂರಿಗೆ ಬಂದು ನೆಲೆಸಿದರು. ಶುರುವಿನಲ್ಲಿ ಪೂಜೆ, ಪುನಸ್ಕಾರ ಮಾಡಿಕೊಂಡಿದ್ದ ಇವರು ಹಾಸ್ಯ ಪ್ರಿಯರು. ಇದೇ ಹಾಸ್ಯ ಮುಂದೊಂದು ದಿನ ತನ್ನ ಜೀವನವನ್ನೇ ಬದಲಿಸ ಬಹುದೆಂಬ ಕಲ್ಪನೆಯೂ ಅವರಿಗಿರಲಿಕ್ಕಿಲ್ಲ. ಹಾಸನ ಸೇರಿದಂತೆ ಕೊಡಗು, ಚಿಕ್ಕಮಗಳೂರು, ತುಮಕೂರು,ಶಿವಮೊಗ್ಗ ಹೀಗೆ 5 ಜಿಲ್ಲೆಗಳಲ್ಲಿ ಆಲೂರು ನಾಗರಾಜ್ ಎಂದರೆ ಫೇಮಸ್. ಸ್ಥಳೀಯವಾಗಿ ನಡೆಯುವ ಸಂಗೀತಗೋಷ್ಠಿಗಳಿಂದ ಹಿಡಿದು ಶಾಲಾ ಕಾಲೇಜು, ಸರ್ಕಾರಿ ಕಾರ್ಯ ಕ್ರಮಗಳಲ್ಲಿ ಇವರನ್ನು ಆಹ್ವಾನಿಸುತ್ತಾರೆ. ಇದುವರೆಗೆ ಸುಮಾರು 2000ಕ್ಕೂ ಅಧಿಕ ಜನಪದ ಕಾರ್ಯಕ್ರಮ ನಡೆಸಿಕೊಟ್ಟ ಕೀರ್ತಿ ಅವರದು. ಪೌರೋಹಿತ್ಯದ ನಡುವೆಯೇ 20 ವರ್ಷಗಳಿಂದ ಈ ಕಾರ್ಯಕ್ರಮಗಳನ್ನು ನಡೆಸುತ್ತಿರುವ ನಾಗರಾಜ್ ಈಗಲೂ ಚಿರ ಯುವಕ ಇವರ ನಡೆ ನುಡಿಗೆ ಯುವಕರೂ ನಾಚಬೇಕು. ಬೆಂಕಿ ಪೊಟ್ಟಣ ತರಲು ಬೈಕ್ ಹತ್ತುವ ಈಗಿನ ಯುವಕರ ನಡುವೆ ಅರಳು ಹುರಿದಂತೆ ಮಾತನಾಡುವ, ಒಂದೆಡರಡು ಕಿ.ಮೀ.ನಡೆಯಲು ಅಂಜದ ಚೈತನ್ಯದ ಚಿಲುಮೆ. ಜನಪ್ರಿಯತೆಯನ್ನು ಬಯಸದೇ ಗೌರವದಿಂದ ಬಾಳುತ್ತಿರುವ ಹಿರಿಯ ಜೀವಕ್ಕೆ 77 ವರ್ಷ. ಅಲ್ಪ ಸ್ವಲ್ಪ ಬರೆಯುವ ಚಟವಿದ್ದ ಇವರು ಬರೆದ ಒಳ್ನುಡಿ ಎಂಬ ಮಕ್ಕಳ ಸಾಹಿತ್ಯವನ್ನು ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಬಿಡುಗಡೆ ಮಾಡಿದ್ದನ್ನು ಹೆಮ್ಮೆಯಿಂದ ನೆನೆಯುತ್ತಾರೆ. ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಹೊಂದಿದ್ದ ತಮ್ಮ ಕಿರಿಯ ಮಗನನ್ನು ಪ್ರೋತ್ಸಾಹಿಸಲೆಂದು ಆರಂಭಿಸಿದ ಆಲೂರು ಮಿತ್ರ ಎಂಬ ದಿನಪತ್ರಿಕೆಯನ್ನು 3 ವರ್ಷ ಕಷ್ಟಪಟ್ಟು ನಡೆಸಿದರು. ನಂತರ ಎರಡೂ ಕಡೆಯಿಂದ ಸೋಲನುಭವಿಸಿ ಪತ್ರಿಕೆಯ ಸಹವಾಸವೇ ಬೇಡವೆಂದು ಇದೀಗ ನೆಮ್ಮದಿಯಿಂದಿದ್ದಾರೆ.