ಸಾಹಿತ್ಯ ಸಮ್ಮೇಳನಕ್ಕೆ ಸ್ವಾಮೀಜಿಯಿಂದ ರು. 1,11,111
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಜೂನ್ 14 ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ನೆರವಿಗಾಗಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 1,11,111ರು.ಗಳನ್ನು ನೀಡಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಎನ್. ಲೋಕೇಶ್ ತಿಳಿಸಿದರು. ತಾಲೂಕು ಸಮ್ಮೇಳನ ನಡೆಸಲು ಕೇಂದ್ರ ಪರಿಷತ್ನಿಂದ 1ಲಕ್ಷ ರು. ನೀಡುತ್ತಿದ್ದು, ಸಮ್ಮೇಳನ ಯಶಸ್ವಿಯಾಗಿ ನಡೆಸುವ ಸಲುವಾಗಿ ತಾಲೂಕಿನ ಸಾಹಿತ್ಯಾಸಕ್ತರಿಂದ ಆರ್ಥಿಕ ನೆರವು ನೀಡುವಂತೆ ಸಮ್ಮೇಳನದ ಸ್ವಾಗತ ಸಮಿತಿ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಅನುದಾನವನ್ನು ಕೆಲವರು ನೀಡುತ್ತಿದ್ದಾರೆ ಎಂದು ತಿಳಿಸಿದರು. ಸಮ್ಮೇಳನಕ್ಕೆ ಆರ್ಥಿಕ ನೆರವು ನೀಡುವ ಆಸಕ್ತರು ತಹಸೀಲ್ದಾರ್ ಅವರಿಗೆ ನೇರವಾಗಿ ಹಣ ನೀಡಬಹುದು. ಅಥವಾ ಬ್ಯಾಂಕ್ ಖಾತೆಗೆ ಹಣ ತುಂಬಬಹುದಾಗಿದೆ ಎಂದು ತಿಳಿಸಿದರು.
13ಕ್ಕೆ ಕುಮಾರ ಚಲ್ಯಗೆ ಸನ್ಮಾನ
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಜೂ.14ರಂದು ನಡೆಯಲಿರುವ ತಾಲೂಕು ಮಟ್ಟದ ದ್ವಿತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಕುಮಾರ ಚಲ್ಯ ಅವರಿಗೆ ಜೂ.13ರಂದು ತವರಿನಲ್ಲಿ ಸನ್ಮಾನಿಸಲಾಗುವುದು ಎಂದು ವಕೀಲ ರಾಘವೇಂದ್ರ ಚಲ್ಯ ತಿಳಿಸಿದರು.
ಕುಮಾರ ಚಲ್ಯ ಅವರು ಸೇವೆ ಸಲ್ಲಿಸುತ್ತಿರುವ ಕುವೆಂಪು ವಿಶ್ವವಿದ್ಯಾನಿಲಯದ ಬಿ.ಆರ್. ಪ್ರಾಜೆಕ್ಟ್ನ ಅವರ ನಿವಾಸಕ್ಕೆ ತೆರಳಿ ಜೂ.13ರಂದು ಗ್ರಾಮಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದ್ದು, ಅವರನ್ನು ಗ್ರಾಮಕ್ಕೆ ಕರೆತಂದು ತವರಿನ ಸನ್ಮಾನ ಮಾಡಲಾಗುವುದು ಎಂದರು.
ಚಿನ್ನಾಭರಣ ಅಪಹರಣ
ಅರಕಲಗೂಡು: ಬಾಣಾವಾರ ಹೋಬಳಿ, ಬೈರಗೊಂಡನಹಳ್ಳಿ ದಾಖ್ಲೆ, ಬಸವನಗರ ಗ್ರಾಮದ ಎಂ.ಕೆ.ಶಿವಣ್ಣ ಎಂಬುವರ ಮನೆಯಲ್ಲಿ ಕಳ್ಳರು ಚಿನ್ನಾಭರಣ ಕಳವು ಮಾಡಿದ್ದಾರೆ. ಮನೆಯ ಹೆಂಚುಗಳನ್ನು ಕಳ್ಳರು ತೆಗೆದು ಒಳಪ್ರವೇಶಿಸಿ ಮನೆಯ ಬೀರುವಿನಲ್ಲಿದ್ದ 17,000 ರು. ಮೌಲ್ಯದ ಬಿಳಿ ಹರಳಿನ 3 ಗ್ರಾಂನ 1 ಜತೆ ಚಿನ್ನದ ಓಲೆ, 3 ಗ್ರಾಂನ 1 ಚಿನ್ನದ ಸಾದಾ ಉಂಗುರ, 100 ಗ್ರಾಂನ ಬೆಳ್ಳಿಯ 3 ಜೊತೆ ಕುಂಕುಮದ ಬಟ್ಟಲು, 1 ಜತೆ ಸಣ್ಣ ಬೆಳ್ಳಿಯ ದೀಪ ಕಳವು ಮಾಡಿದ್ದಾರೆ. ಈ ಬಗ್ಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.