ಶಾಸಕ ಎಂ.ಟಿ.ಕೆಗೆ ಹುಟ್ಟು ಹಬ್ಬದ ಸಂಭ್ರಮ
ಕ.ಪ್ರ.ವಾರ್ತೆ ತುರುವೇಕೆರೆ ಜೂ. 10
ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರು 63 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಕೇಕ್ ಕತ್ತರಿಸಿ ಸಿಹಿ ವಿತರಣೆ ಮಾಡುವ ಮೂಲಕ ಸಂಭ್ರಮ ಪಟ್ಟರು. ತಾಲೂಕು ಪಂಚಾಯ್ತಿಯ ಆವರಣದಲ್ಲಿರುವ ಶಾಸಕರ ಕೊಠಡಿಯಲ್ಲಿ ಶಾಸಕರ ಹೆಸರಿನಲ್ಲಿ ಮಾಡಿಸಲಾಗಿದ್ದ ದೊಡ್ಡ ಗಾತ್ರದ ಕೇಕ್ ಅನ್ನು ತಾಲೂಕು ಪಂಚಾಯ್ತಿಯ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ತಾ.ಪಂ.ಸದಸ್ಯ ಕೋಳಾಲ ಗಂಗಾಧರ್, ತಾ.ಪಂ.ಅಧ್ಯಕ್ಷ ಎಂ.ಡಿ.ರಮೇಶ್ ಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಜೆಡಿಎಸ್ ವಕ್ತಾರ ಡಾ.ಬಿ.ನಂಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ದಂಡಿನಶಿವರ ಶಂಕರೇಗೌಡ, ಆನೇಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ದೊಡ್ಡಾಘಟ್ಟ ಶ್ರೀನಿವಾಸ್, ಜಫ್ರಲ್ಲಾ, ಮೊದಲಾದವರು ಸಂಭ್ರಮದಿಂದ ಶಾಸಕರ 63 ನೇ ಹುಟ್ಟು ಹಬ್ಬವನ್ನು ಆಚರಿಸಿದರು.
ಶಾಸಕರಿಗೆ ದೇವರು ಹೆಚ್ಚಿನ ಆರೋಗ್ಯ, ಅಧಿಕಾರವನ್ನು ನೀಡಲಿ ಎಂದು ಪ್ರಾರ್ಥಿಸಿದರು. ಕೋಳಾಲ ಗಂಗಾಧರ್ ಮಾತನಾಡಿ ಶಾಸಕ ಎಂ.ಟಿ.ಕೃಷ್ಣಪ್ಪನವರು ತುರುವೇಕೆರೆಯನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಗುರಿ ಹೊಂದಿದ್ದಾರೆ. ಅವರ ಉದ್ದೇಶ ಈಡೇರಲಿ ಎಂದು ಹಾರೈಸಿದರು. ಕಚೇರಿಗೆ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಸಿಹಿ ವಿತರಣೆ ಮಾಡಲಾಯಿತು.