ಅಕ್ರಮ ಮರಳು ಸಾಗಣೆ ತಡೆಗೆ ಆಗ್ರಹ
ಕುಣಿಗಲ್: ಶಿಂಷಾ ನದಿ ಪಾತ್ರದಲ್ಲಿ ಕೊಡವತ್ತಿ, ಬೊಮ್ಮೇನಹಳ್ಳಿ, ಇತರೆ ಪ್ರದೇಶದಲ್ಲಿ ವ್ಯಾಪಕವಾಗಿ ಅಕ್ರಮ ಮರಳು ಸಾಗಣೆ ನಡೆಯುತ್ತಿದ್ದು, ನಿಯಂತ್ರಣಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯ ತಾಲೂಕು ಅಧ್ಯಕ್ಷ ಎನ್.ಕೆ.ಸತೀಶ್ ಆಗ್ರಹಿಸಿದ್ದಾರೆ. ಈ ಬಗ್ಗೆ ವಿವರ ನೀಡಿರುವ ಅವರು, ಗೊಲ್ಲರಹಟ್ಟಿ, ಚಲಮಸಂದ್ರ ಗ್ರಾಮಗಳಸಮೀಪದ ತೊರೆ ಸೇರಿದಂತೆ ಶಿಂಷಾ ನದಿ ಪಾತ್ರದ ಕೊಡವತ್ತಿ, ಬೊಮ್ಮೇನಹಳ್ಳಿ ಸೇರಿದಂತೆ ನದಿಪಾತ್ರ ವಿವಿಧೆಡೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಕೆಲ ಅಕ್ರಮ ಮರಳು ಸಾಗಾಣೆದಾರು, ನಿರಂತರವಾಗಿ ಮರಳು ಸಾಗಾಣೆ ದಂಧೆಯಲ್ಲಿ ನಿರತರಾಗಿದ್ದು, ಇವರ ಕೃತ್ಯಕ್ಕೆ ಕಳೆದ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಕಂದಾಯ ಹಾಗೂ ಪೊಲೀಸ್ ಇಲಾಖಾ ಸಿಬ್ಬಂದಿಗಳು, ಅಕ್ರಮ ಮರಳು ಸಾಗಾಣೆದಾರರೊಂದಿಗೆ ಅಕ್ರಮ ಮೈತ್ರಿ ಮಾಡಿಕೊಂಡಿದ್ದಾರೆ. ಮೇಲಾಧಿಕಾರಿಗಳ ದಾಳಿ ನಡೆಸುವ ಬಗ್ಗೆ ಮಾಹಿತಿ ನೀಡುವ ಮೂಲಕ ಅಕ್ರಮ ಮರಳು ಸಾಗಾಣೆಗೆ ಕುಮ್ಮಕ್ಕು ನೀಡುತ್ತಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.