ತಿಪಟೂರು-ತುರುವೇಕೆರೆ ಮಾರ್ಗದಲ್ಲಿ ಸಾರಿಗೆ ಅವ್ಯವಸ್ಥೆ: ಆರೋಪ
ತಿಪಟೂರು: ತಿಪಟೂರು ನಗರದಿಂದ ನೊಣವಿನಕೆರೆ ಮಾರ್ಗವಾಗಿ ತುರುವೇಕೆರೆಗೆ ಸಾರಿಗೆ ವ್ಯವಸ್ಥೆ ಹೇಳತೀರದಷ್ಟು ಅವ್ಯವಸ್ಥೆಯಾಗಿದ್ದು, ಇದರಿಂದ ಈ ಮಾರ್ಗದ ನೂರಾರು ಗ್ರಾಮಗಳ ಸಾರ್ವಜನಿಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ದಿನನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡುವ ರೈತರು, ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ. ಜಿಲ್ಲಾ ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೊಣವಿನಕೆರೆ ಹೋಬಳಿ ಮತ್ತು ತುರುವೇಕೆರೆ ತಾಲೂಕಿನಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಕೊಬ್ಬರಿ ನಗರಿ ತಿಪಟೂರಿನ ವಿವಿಧ ಶಾಲಾ-ಕಾಲೇಜುಗಳಿಗೆ ಬಂದು ಹೋಗುತ್ತಾರೆ. ಇನ್ನುಳಿದಂತೆ ರೈತರು, ಸಾರ್ವಜನಿಕರು ದಿನನಿತ್ಯ ಕೊಬ್ಬರಿ ಮಾರುಕಟ್ಟೆ ಸೇರಿದಂತೆ ಹತ್ತು ಹಲವು ಕಚೇರಿಗಳಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳಿಗೆ ನೂರಾರು ಮಂದಿ ಈ ಮಾರ್ಗದಲ್ಲಿ ಓಡಾಡುತ್ತಾರೆ. ತಿಪಟೂರು ಮತ್ತು ತುರುವೇಕೆರೆ ಎರಡೂ ತಾಲೂಕು ಕೇಂದ್ರಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋಗಳಿದ್ದರೂ ಸಹ ಕಲ್ಪತರು ನಗರಿಯ ಎರಡೂ ತಾಲೂಕಿನ ಸಾರ್ವಜನಿಕರು ಸಾರಿಗೆ ವ್ಯವಸ್ಥೆ ನಿತ್ಯ ಪರದಾಡುವಂತಾಗಿದೆ. ಹೋಬಳಿ ಕೇಂದ್ರ ನೊಣವಿನಕೆರೆಯಿಂದ ಬೆಳಿಗ್ಗೆ 8ರಂದ 10ಗಂಟೆಯವರೆಗೆ ಐದಾರು ಬಸ್ಗಳ ಅವಶ್ಯಕತೆ ಇದೆ. ಆದರೆ ಈ ಸಮಯದಲ್ಲಿ ಬಸ್ಗಳಿಲ್ಲದೆ ತೀವ್ರ ತೊಂದರೆಯಾಗಿದೆ. ಅದೇ ರೀತಿ ಸಂಜೆ 4ರಿಂದ 7ಗಂಟೆಯವರೆಗೂ ತಿಪಟೂರಿನಿಂದ ಬಸ್ಗಳಿಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವಂತಾಗಿದೆ. ಚಿಕ್ಕ ಚಿಕ್ಕ ಮಕ್ಕಳು ಶಾಲೆಗೆ ಬರುತ್ತಿದ್ದು, ಸಮಯಕ್ಕೆ ಸರಿಯಾಗಿ ಮನೆ ಸೇರಲು ಪರದಾಡುವಂತಾಗಿದೆ. ಈ ಬಗ್ಗೆ 2-3 ಬಾರಿ ಪ್ರತಿಭಟನೆ ನಡೆದಿವೆ. ತಾಲೂಕು, ಜಿಲ್ಲಾ ಸಾರಿಗೆ ಅಧಿಕಾರಿಗಳವರೆಗೂ ಹತ್ತಾರು ಬಾರಿ ದೂರು ಸಲ್ಲಿಕೆಯಾಗಿದ್ದರೂ ಈವರೆಗೂ ಯಾವುದೇ ರೀತಿಯ ಅನುಕೂಲವಾಗಿಲ್ಲ. ಕನಿಷ್ಠ ವಿದ್ಯಾರ್ಥಿಗಳ ಮನವಿಗೆ ನಯಾಪೈಸೆ ಬೆಲೆ ಇಲ್ಲದಂತಾಗಿದೆ ಎಂಬುದು ವಿದ್ಯಾರ್ಥಿ ಮುಖಂಡರ ಆಕ್ರೋಶವಾಗಿದೆ.