ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ
ಕ.ಪ್ರ.ವಾರ್ತೆ ಕುಣಿಗಲ್ ಜೂ.11
ಹಳೇ ರಾಷ್ಟ್ರೀಯ ಹೆದ್ದಾರಿ 48ರ ಇಕ್ಕೆಲಗಳಲ್ಲಿ ಹಾಕಲಾಗಿರುವ ಬೀದಿ ದೀಪಗಳ ಸಂಬಂಧ ಪುರಸಭೆ ಸಮರ್ಪಕವಾಗಿ ನಿರ್ವಹಣೆ ಮಾಡದೆ, ಸಾರ್ವಜನಿಕರು ಹಾಗೂ ಮುಗ್ದ ಜಾನುವಾರುಗಳ ಪಾಲಿಗೆ ಮುಳುವಾಗಿ ಪರಿಣಮಿಸಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
2008ರಲ್ಲಿ ಅಂದಿನ ಶಾಸಕ ಎಚ್. ನಿಂಗಪ್ಪನವರ, ಶಾಸಕರ ವಿಶೇಷ ಅನುದಾನದಲ್ಲಿ, ಪಟ್ಟಣದಲ್ಲಿ ಹಾದುಹೋಗಿದ್ದ ರಾಹೆ 48ರ ರಸ್ತೆಬದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 68ಲಕ್ಷ ರು.ವೆಚ್ಚದಲ್ಲಿ ಸೋಡಿಯಂ ಬೀದಿದೀಪಗಳನ್ನು 1ನೇ ವಾಡ್ನಿಂದ ಹಿಡಿದು 23ನೇ ವಾರ್ಡ್ನ ಪುರಸಭೆ ಗಡಿ ಕೊನೆಭಾಗದವರೆಗೂ ಸುಮಾರು ಮೂರುವರೆ ಕಿಮಿ ಉದ್ದ ಇನ್ನೂರಕ್ಕೂ ಹೆಚ್ಚು ಬೀದಿ ದೀಪಗಳನ್ನು ಅಳವಡಿಸಿ, ಬೀದಿ ದೀಪಗಳ ವಿದ್ಯುತ್ ಸರಬರಾಜಿಗೆ ಭೂಮಿಯ ಒಳಗೆ ಭೂಗತ ಕೇಬಲ್ಗಳನ್ನು ಅಳವಡಿಸಿ, ನಾಲ್ಕು ಕಡೆಗಳಲ್ಲಿ ನಿಯಂತ್ರಣ್ಕಕೆ ಸ್ವಿಚ್ಚಿಂಗ್ ಪ್ಯಾನಲ್ಗಳನ್ನು ರಸ್ತೆ ಬದಿಯಲ್ಲೆ ಅಳವಡಿಸಲಾಗಿತ್ತು.
ಜಾನುವಾರುಗಳಿಗೆ ಆಘಾತ: ಪ್ರಾರಂಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬೀದಿ ದೀಪಗಳು, ನಂತರದ ದಿನಗಳಲ್ಲಿ ಪುರಸಭೆಯ ನಿರ್ವಹಣೆಯ ಕೊರತೆಯ ಪರಿಣಾಮ, ಕಂಬಗಳು ಅಳವಡಿಸಿದ ನಾಲ್ಕು ವರ್ಷಕ್ಕೆ ತುಕ್ಕು ಹಿಡಿದು ಕೆಲವು ಉರುಳುವ ಹಂತಕ್ಕೆ ತಲುಪಿದರೆ, ಮತ್ತೆ ಕೆಲವು ಇನ್ನೇನು ಶಾಶ್ವತವಾಗಿ ಭೂಮಿಯ ಆಸರೆ ಪಡೆಯುವಂತಾಗಿದೆ. ಈ ಮಧ್ಯೆ ಭೂಮಿಯೊಳಗೆ ಅಳವಡಿಸಿದ್ದ ಕೇಬಲ್ಗಳು ಹಾಳಾದ ಪರಿಣಾಮ, ನಿರ್ವಹಣೆ ಮಾಡುವವರು ನೆಲಮಟ್ಟದಲ್ಲೆ ಬೀದಿ ದೀಪಗಳಿಗೆ ವೈರ್ ಸಂಪರ್ಕ ಕಲ್ಪಿಸಿ, ವೈರ್ಗಳು ನೆಲಮಟ್ಟದಲ್ಲೆ ಉಳಿದು ವಿದ್ಯುತ್ ಅಘಾತ ನೀಡಲು ಸಜ್ಜಾಗಿ ನಿಂತಿವೆ. ಅಲ್ಲದೆ ಈಗಾಗಲೆ ರಸ್ತೆ ಬದಿಯ ಹುಲ್ಲನ್ನು ಮೇಯಲು ಬರುವ ಜಾನುವಾರುಗಳಿಗೆ ಅಘಾತ ನೀಡಿದೆ.
ತಪ್ಪಿದ ಅಪಾಯ: ಇನ್ನು ಬಿದನಗೆರೆ ಸಮೀಪದಲ್ಲಿ ರಾಹೆ 48ರ ಪಕ್ಕದಲ್ಲೆ ಅಳವಡಿಸಲಾದ ಸ್ವಿಚ್ಚಿಂಗ್ ಪ್ಯಾನಲ್ ಕುಸಿದು ರಸ್ತೆಗೆ ಬಿದ್ದ ಪರಿಣಾಮ ಕಳೆದ ಸೋಮವಾರ ಸಂಜೆ, ಈ ಭಾಗದಲ್ಲಿ ಗ್ರೌಂಡಿಂಗ್ ಆಗಿ ನಾಗರಿಕರ ಒತ್ತಾಯದ ಮೇರೆಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿತು. ಹೀಗಾಗಿ ಹೆಚ್ಚಿನ ಅಪಘಾತ ತಪ್ಪಿದೆ. ಕುವೆಂಪುನಗರದ ಮಹಾತ್ಮಗಾಂಧಿ ಸಮೀಪದ ಪ್ಯಾನಲ್ದೂ ಇದೆ ಕಥೆಯಾದರೆ, ವೈ.ಕೆ. ರಾಮಯ್ಯ ತೋಟದ ಸಮೀಪ ಅಳವಡಿಸಿರುವ ಪ್ಯಾನಲ್ ಕುಸಿದು ಬಲಿಗಾಗಿ ಕಾದು ನಿಂತಿದ್ದರೆ, ಪ್ರಥಮ ದರ್ಜೆ ಕಾಲೇಜಿನ ಬಳಿಯ ಪ್ಯಾನಲ್ ಸ್ಥಿತಿಯೂ ಇದೆ ಆಗಿದೆ.
ಇನ್ನು ರಾಹೆ 48ರ ರಸ್ತೆ ಬದಿಗೆ ಹಾಕಲಾಗಿರುವ ಬೀದಿ ದೀಪಗಳಿಗೆ ಹೊರಭಾಗದಿಂದ ಸಂಪರ್ಕ ಕಲ್ಪಿಸಿರುವ ಕಾರಣ, ಕಳಪೆ ಗುಣಮಟ್ಟದ ವೈರ್ಗಳು ಬಳಕೆ ಮಾಡಿ ವೈರ್ಗಳ ಮೇಲ್ಮೈ ಸುರಕ್ಷತಾ ಕವಚ ಹಾಳಾಗಿ ಹಲವರಿಗೆ ಶಾಕ್ ನೀಡಿದೆ. ಮಳೆಗಾಲವಾದ್ದರಿಂದ ಸಂಜೆಯಾದರೆ ಪಟ್ಟಣದಲ್ಲಿ ಜಿಡಿಮಳೆ ಬೀಳುತ್ತಿದ್ದು, ಬೀದಿದೀಪದ ಕಂಬದ ಬಳಿ ಬರುವವರಿಗೆ ಬೆಳಕಿನ ಜೊತೆಗೆ ವಿದ್ಯುತ್ ಅಘಾತ ನೀಡಿ ಬಲಿಗಾಗಿ ಕಾಯುವಂತಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ನಮ್ಮ ಪಾತ್ರ ಇಲ್ಲ: ಈ ಬಗ್ಗೆ ಬೆಸ್ಕಾಂ ಸಿಬ್ಬಂದಿಯನ್ನು ಸಂಪರ್ಕಿಸಿದರೆ, ಅದು ಪುರಸಭೆಯವರು ನಿರ್ವಹಣೆ ಮಾಡಬೇಕಿದ್ದು ನಮ್ಮ ಪಾತ್ರ ಇಲ್ಲ ಎನ್ನುತ್ತಾರೆ. ಇನ್ನು ಪುರಸಭೆಯ ಎಲೆಕ್ಟಿಕಲ್ ವಿಭಾಗದ ಜೆಇ ಅವರನ್ನು ಪ್ರಶ್ನಿಸಿದರೆ, ಬೀದಿ ದೀಪನಿರ್ವಹಣೆಗೆ ಗುತ್ತಿಗೆ ನೀಡಿದ್ದು ಅವರು ಮಾಡಬೇಕೆಂಬ ಉತ್ತರ ನೀಡುತ್ತಾರೆಂದು ದೂರಿರುವ ನಾಗರಿಕರಾದ ದಿನೇಶ್, ಮಂಜುನಾಥ್, ಸಂಬಂಧಪಟ್ಟ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಪುರಸಭೆ ಹಾಗೂ ಬೆಸ್ಕಾಂ ಇಲಾಖಾಧಿಕಾರಿಗಳನ್ನೇ ನೇರಹೊಣೆ ಮಾಡಿ ಮೇಲಾಧಿಕಾರಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಲಿ ಎಂದು ಅವರು ಆಗ್ರಹಿಸಿದ್ದಾರೆ.