'ಮಕ್ಕಳ ಸಾಹಿತ್ಯ ಒಂದು ಒಲುಮೆಯ ಚಿಲುಮೆ'
ತುಮಕೂರು: ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯ ಒಂದು ಆಕರ್ಷಕ ಚಿಲುಮೆಯಾಗಿ ಬೆಳೆದು ಬಂದಿದೆ ಎಂದು ಉಪನ್ಯಾಸಕಿ ಜಿ. ದೇವಿಕಾ ಅಭಿಪ್ರಾಯಪಟ್ಟರು.
ಅರು ನಗರದ ಕಣ್ಮುಚ್ಚಾಲೆ ಮಕ್ಕಳ ಗುಂಪು ಹಾಗೂ ಶೃತ ಜೈನ್ ಮಹಿಳಾ ಮಿಲನ್ ಆಶ್ರಯದಲ್ಲಿ ನಗರದ ಬಸವೇಶ್ವರ ಬಾಲಕಿಯರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಸಾಹಿತ್ಯ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಅವಿಭಾಜ್ಯ ಅಂಗವಾಗಿ ರೂಪಿತಗೊಂಡು ಹಿರಿಯ ಮಕ್ಕಳ ಸಾಹಿತಿಗಳು ಶಿಶುಗೀತೆಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಮಕ್ಕಳಿಗೆ ಹೊರಹೊಮ್ಮಿಸಲು ಸಾಕಷ್ಟು ಮಕ್ಕಳ ಸಂಕಲನ ಮಾಡಿದ್ದಾರೆ ಎಂದರು.
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ ಕೀರ್ತಿ ಜೈನ ಸಾಹಿತಿಗಳದ್ದು. ಆದಿಕವಿ ಪಂಪ, ಪೊನ್ನ, ಜನ್ನ ಮೊದಲಾದ ಜೈನ ಕವಿಗಳು ಕನ್ನಡ ಬೆಳವಣಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಗಾಳಿಪಟದಂತಹ ಪ್ರಾಚೀನ ಕಲೆಯನ್ನು ಮಕ್ಕಳ ಮೂಲಕ ಬೆಳೆಸುತ್ತಿರುವ ಮಕ್ಕಳ ಸಾಹಿತಿ ಸಿದ್ದರಾಜ್ ಐವಾರ್ ನಿಜಕ್ಕೂ ಅಭಿನಂದನಾರ್ಹರು ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮಕ್ಕಳ ಸಾಹಿತಿ ಸಿದ್ದರಾಜ್ ಐವಾರ್ ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಬೆಳೆಸುವುದು ಪಾಲಕರ, ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ಬಹುಮಾನ ವಿತರಿಸಿ ಬೆಂಗಳೂರು ಭಾರತೀಯ ಜೈನ ಮಿಲನ ನಿರ್ದೇಶಕಿ ಶ್ಯಾಮಲ ಧರ್ಮೇಂದ್ರ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತಿಗಳು ತಳಹದಿಯಾಗಿದ್ದು ಪಂಪ, ರನ್ನ, ಜನ್ನ ಮುಂತಾದ ಕವಿಗಳು ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.
ಮಕ್ಕಳ ಕವಿಗೋಷ್ಠಿಯಲ್ಲಿ ಅಂಕಿತಾ, ಟಿ.ಎಸ್. ಬಾಲಾಜಿ, ಎಂ.ಎಸ್. ನಂದಿನಿ, ಬಿ.ಎಸ್. ಸಹನ, ಭೂಮಿಕಾ, ಚಿನ್ಮಯಿ, ಮಂಜುನಾಥ್, ತುರುವೇಕೆರೆ, ಗಗನ, ಭಾವನ ಸೇರಿ 32 ಬಾಲಕವಿಗಳು ಕವಿತೆ ವಾಚಿಸಿದರು. ಇದೇ ಸಂದರ್ಭದಲ್ಲಿ ತುಮಕೂರು ಶೃತ ಜೈನ ಮಹಿಳಾ ಮಿಲನ ಸಂಸ್ಥೆ ವತಿಯಿಂದ ಮಕ್ಕಳ ಸಾಹಿತಿ ಸಿದ್ದರಾಜ್ ಐವಾರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶೃತ ಜೈನ ಮಹಿಳಾ ಮಿಲನ್ ಅಧ್ಯಕ್ಷೆ ಸ್ಮಿತಾ ಪ್ರಸಾದ್, ಸಾಹಿತಿ ಚಂದ್ರಶೇಖರ ಚ. ಚೋಟದ, ಟಿ.ಆರ್. ಶಾರದಮ್ಮ, ಧರಣೇಂದ್ರ, ಕೆ. ಗಣೇಶ್ಪ್ರಸಾದ್ ಇದ್ದರು.