ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶ್ರೀಮಂತ ವ್ಯಕ್ತಿಗಳ ಮನೆಯಲ್ಲಿ ಬಾಲಕಾರ್ಮಿಕರು

Rashmi Kasaragodu
Updated On : 12 Jun 2013, 11:45 am

ಕ.ಪ್ರ.ವಾರ್ತೆ    ತುಮಕೂರು    ಜೂ. 12
ಶ್ರೀಮಂತ, ಪ್ರತಿಷ್ಠಿತ ವ್ಯಕ್ತಿಗಳ ಮನೆಗಳಲ್ಲೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಬಿ. ಪ್ರಭಾಕರಶಾಸ್ತ್ರಿ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನ ಸಿದ್ದಗಂಗಾ ಫಾರ್ಮಸಿ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ - 2013 ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ನಾಗರಿಕ ಸಮಾಜ ಎಂದು ಹೇಳಿಕೊಳ್ಳುವ ನಮ್ಮ ಸಮಾಜದಲ್ಲೂ ಒಂದಲ್ಲ, ಒಂದು ರೀತಿಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಆಚರಿಸಲಾಗುತ್ತಿದೆ. ಇದೊಂದು ದೊಡ್ಡ ದುರಂತ. ಪ್ರತಿಷ್ಠಿತ ವ್ಯಕ್ತಿಗಳ ಮನೆಗಳಲ್ಲಿ, ಅವರ ಮಕ್ಕಳಿಗಿಂತ ಕಿರಿಯ ವಯಸ್ಸಿನ ಮಕ್ಕಳು, ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಪ್ರತಿಷ್ಠಿತ, ಶ್ರೀಮಂತ ವ್ಯಕ್ತಿಗಳ ಬೂಟ್ಗಳಿಗೆ ಪಾಲಿಷ್ ಹಾಕುವುದು, ಮನೆ ಕೆಲಸ ಮಾಡುವುದು ನಡೆದೇ ಇದೆ. ಈ  ಶ್ರೀಮಂತ ಜನ ತಮ್ಮ, ತಮ್ಮ ಮನೆಗಳಲ್ಲೇ ಬೆಳಗಿನಿಂದ ಸಂಜೆವರೆಗೆ ಬಾಲ ಕಾರ್ಮಿಕ ಪದ್ಧತಿಯನ್ನು ಆಚರಿಸುತ್ತಿದ್ದು, ವೇದಿಕೆಗಳಲ್ಲಿ ಮಾತ್ರ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಮಾತನಾಡುವುದು ನಾಚಿಕೆಗೇಡು ಎಂದು ಮಾರ್ಮಿಕವಾಗಿ ನುಡಿದರು.
ಕಾನೂನು ಮಹಾವಿದ್ಯಾಲಯ ಕ್ಯಾಂಟೀನ್ ಹೊರತಲ್ಲ: ತಾವೊಮ್ಮೆ ಅಂತರಾಷ್ಟ್ರೀಯ ಖ್ಯಾತಿಯ ಕಾನೂನು ಮಹಾವಿದ್ಯಾಲಯವೊಂದಕ್ಕೆ ಅಲ್ಲಿನ ಪ್ರೊಫೆಸರ್ ಸ್ನೇಹಿತರ ಜತೆ ಅಲ್ಲಿನ ಕ್ಯಾಂಟೀನ್ಗೆ ಹೋಗಿದ್ದೆ. ಆಗ ಅಲ್ಲಿ ಹುಡುಗನೊಬ್ಬ ಟೀ ತಂದುಕೊಟ್ಟ. ವಯಸ್ಸು ಕೇಳಿದೆ. ಹುಡುಗ 16 ಎಂದ. ಜಾಗೃತರಾದ ಸ್ನೇಹಿತ ಪ್ರೊಫೆಸರ್ ಹದಿನಾರು ವಯಸ್ಸಿನ ಹುಡುಗ. ಟೀ ಕುಡಿ ಎಂದರು. ಆದರೆ ಹುಡುಗನ ವಯಸ್ಸು 12 ಮೀರಿರಲಿಲ್ಲ. ಮೇಲ್ನೋಟಕ್ಕೆ ವಯಸ್ಸು ಗೋಚರಿಸುತ್ತಿತ್ತು. ಬೇಜಾರಾಯಿತು. ತಾವು ಟೀ ಕುಡಿದಾಗಿದೆ ಎಂದು ಸಮಜಾಯಿಷಿ ಹೇಳಿದೆ. ಅಲ್ಲಿಂದ ಹೊರ ಬರುವ ವೇಳೆ ಕಾನೂನು ಮಹಾವಿದ್ಯಾಲಯ ಕೂಡ ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತವಾಗಿಲ್ಲವಲ್ಲ. ಬಾಲ ಕಾರ್ಮಿಕ ಪದ್ಧತಿ ತೊಲಗಿಸುವ, ಸರಿಪಡಿಸುವ ಎಂಬ ಚಿಂತೆ ಯಾರಿಗೂ ಇಲ್ಲವಲ್ಲ ಎಂಬ ಚಿಂತೆ ಕಾಡತೊಡಗಿತು ಎಂದು ಶಾಸ್ತ್ರಿಗಳು ಸ್ವಾನುಭವ ಹೇಳಿಕೊಂಡರು.
ವಿಚಿತ್ರವಾಗಿ ನೋಡಿದರು: ತಾವೊಮ್ಮೆ ತುಮಕೂರಿನ ಎಪಿಎಂಸಿ ಬಳಿ ಬೆಳಗಿನ ವೇಳೆ ವಾಕಿಂಗ್ ಹೋಗಿದ್ದಾಗ 3 ಜನ ಬಾಲಕಾರ್ಮಿಕರು ಇಟ್ಟಿಗೆ ಗೂಡಿನ ಕೆಲಸದಲ್ಲಿ ತೊಡಗಿದ್ದುದು ಕಂಡು ಬಂತು. ಹೋಗಿ ವಿಚಾರಿಸಿದೆ. ಬಾಲಕರನ್ನು ದುಡಿಮೆಗೆ ಹಚ್ಚಬಾರದು. ಕಾನೂನು ಬಾಹಿರ ಎಂದು ತಿಳುವಳಿಕೆ ಹೇಳಲು ಮುಂದಾದೆ. ಜನ ಗುಂಪು ಗೂಡಿದರು. ನನ್ನನ್ನು ವಿಚಿತ್ರವಾಗಿ ನೋಡಿದರು. ಆ ಹುಡುಗರ ಕುಟುಂಬಕ್ಕೆ, ಆ ಬಾಲಕರಿಗೆ ಹಣ ನೀವು ಕೊಡುತ್ತೀರಾ, ಅವರ ಊಟ, ಬಟ್ಟೆ, ವಸತಿಗೆ ನೀವು ಜವಾಬ್ದಾರರಾ ಎಂದು ಪ್ರಶ್ನೆಗಳ ಸುರಿಮಳೆಗೈದರು. ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿದೆ. ಆದರೆ ಜನತೆ ವಿಚಿತ್ರವಾಗಿ ನೋಡತೊಡಗಿದರು ಎಂದು ತಮ್ಮ ಇನ್ನೊಂದು ಸ್ವಾನುಭವದ ಉದಾಹರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನೀಡಿದರು.
ಕೈಗಾರಿಕಾ ಕ್ರಾಂತಿ ವೇಳೆ: ಕೈಗಾರಿಕಾ ಕ್ರಾಂತಿ ಸಂಭವಿಸದ ವೇಳೆ 4 ವರ್ಷದ ಮಕ್ಕಳೂ ಸಹ ಬಾಲ ಕಾರ್ಮಿಕ ಪದ್ಧತಿಗೆ ಈಡಾಗಿದ್ದರು. ಹಾಲಿ ದೇಶದ ಪಟಾಕಿ ತಯಾರಿಸುವಲ್ಲಿ ಅಗ್ರಸ್ಥಾನದಲ್ಲಿರುವ ತಮಿಳ್ನಾಡಿನ ಶಿವಕಾಶಿ, ಪುರಿ ಬಟ್ಟಿ, ಕಾಶ್ಮೀರಿ ಕಾರ್ಪೆಟ್ ತಯಾರಿಸುವ ವೇಳೆ ಸೇರಿದಂತೆ, ಹೋಟೆಲ್, ಮತ್ತಿತರೆ ಕಡೆ ಬಾಲ ಕಾರ್ಮಿಕರು ದುಡಿಮೆ ಮಾಡುತ್ತಿದ್ದಾರೆ. ಇದನ್ನು ತೊಡೆದು ಹಾಕಲು ಶಿಕ್ಷಣವೊಂದೇ ಮದ್ದು ಎಂದು ಪ್ರಭಾಕರ ಶಾಸ್ತ್ರಿಗಳು ಪ್ರತಿಪಾದಿಸಿದರು.
ಕಾರಣಗಳು: ಬಡತನ, ಜನಸಂಖ್ಯೆ ಹೆಚ್ಚಳ, ಅನಕ್ಷರತೆ, ತಿಳುವಳಿಕೆಯ ಕೊರತೆ ದೇಶದಲ್ಲಿನ ಬಾಲ ಕಾರ್ಮಿಕ ಪದ್ಧತಿಗೆ  ಮೂಲ ಕಾರಣಗಳು. ಮಕ್ಕಳಿಗೆ ವಿದ್ಯಾಭ್ಯಾಸ ದೊರಕಿಸಿಕೊಡುವುದು ಪೋಷಕರ ಆದ್ಯ ಕರ್ತವ್ಯ. ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ಅಂಗನವಾಡಿ ಸಹಾಯಕರಿಯರು, ಸ್ವ ಸಹಾಯ ಸಂಘದ ಕಾರ್ಯಕರ್ತೆಯರಿಗೆ ಅವಕಾಶವಿದೆ. ಇಂತಹ ಮಕ್ಕಳನ್ನು ಕಂಡಾಗ  ಆ ಮಕ್ಕಳ ಪೋಷಕರಿಗೆ ತಿಳಿ ಹೇಳಬೇಕು. ಈ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಿಸಿದರೆ ಸಮಾಜಕ್ಕೆ ಅನುಕೂಲ. ಬಾಲ ಕಾರ್ಮಿಕರಿಗೆ ಬಾಲ್ಯ ವಂಚಿತವಾಗುವುದನ್ನು ತಡೆದಂತಾಗುತ್ತದೆ ಎಂದರು.
ಎಲ್ಲರ ಹೊಣೆ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೇವಲ ಅಂಗನವಾಡಿ, ಸ್ತ್ರೀ ಶಕ್ತಿ, ಸ್ವ ಸಹಾಯ ಸಂಘದ ಮಹಿಳೆಯರಿಗಷ್ಟೇ ಸೀಮಿತವಲ್ಲ. ಈ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಹೊಣೆ. ಸಮಂಜಸವಾಗಿ ಕಾರ್ಯನಿರ್ವಹಿಸಿದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ದೊಡ್ಡ ವಿಷಯವಲ್ಲ ಎಂದು ಶಾಸ್ತ್ರಿಗಳು ಪ್ರತಿಪಾದಿಸಿದರು.
ಯೋಜನೆ ಸದುಪಯೋಗಪಡಿಸಿಕೊಳ್ಳಿ: ಜಿಪಂ ಸಿಇಓ ಗೋವಿಂದರಾಜು ಮಾತನಾಡಿ, ಈಗ ಬೇಕಾದಷ್ಟು ಯೋಜನೆಗಳಿವೆ. ಮಕ್ಕಳನ್ನು ದುಡಿಮೆಗೆ ಕಳುಹಿಸಬೇಕಾದ ಪ್ರಮೇಯವಿಲ್ಲ. ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ, ಸರ್ಕಾರಿ ಕಾರ್ಯಕ್ರಮಗಳು ಬೇಕಾದಷ್ಟಿವೆ. ಪೋಷಕರು ಇತ್ತ ಗಮನಹರಿಸಿ, ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ದೂರವಿರಿಸುವಂತೆ ಮನವಿ ಮಾಡಿದರು.ಸಮಾರಂಭದಲ್ಲಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು, ಜಿಲ್ಲಾ ಪಂಚಾಯತ್ ಸಿಇಓ ಗೋವಿಂದರಾಜು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಉಪನಿರ್ದೇಶಕಿ ಎನ್. ಸುಜಾತ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ. ಮೋಹನ್ಕುಮಾರ್, ವಿದ್ಯೋದಯ ಕಾನೂನು ಕಾಲೇಜಿನ ಉಪನ್ಯಾಸಕ ರಮೇಶ್ ಇತರರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement