ಸ್ವಾತಂತ್ರ್ಯ ಚೌಕ ಲೋಕಾರ್ಪಣೆ
ತುಮಕೂರು: ಕಾರ್ಮಿಕ ಮುಖಂಡ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಕುರಿತ ಅಭಿನಂದನಾ ಗ್ರಂಥ ಸ್ವಾತಂತ್ರ್ಯ ಚೌಕ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ನಡೆಯಿತು.
ಕೃತಿ ಬಿಡುಗಡೆ ಮಾಡಿದ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಬೌದ್ಧಿಕ ಹಾಗೂ ನೈತಿಕವಾಗಿ ಭಾರತ ದೇಶ ದಿವಾಳಿಯಾಗುತ್ತಿದ್ದು ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಮಾತ್ರ ದೇಶ ಸುಭದ್ರ ಸ್ಥಿತಿಗೆ ತರಲು ಸಾಧ್ಯ ಎಂದರು.
ಸಿದ್ಧಾಂತ ಹೇಳುವ ಜನ ದಿವಾಳಿಗೆ ಕಾರಣರಾಗುತ್ತಿದ್ದಾರೆ. ನೈತಿಕ ಅಧಃಪತನ, ನಂಬಿಕೆ, ಅಪನಂಬಿಕೆಗಳ ಕಲುಷಿತ ವಾತಾವರಣದಲ್ಲಿ ಒಬ್ಬರನ್ನು ಒಬ್ಬರು ನಂಬದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಹರಿಕಥಾ ವಿದ್ವಾಂಸ ಡಾ. ಲಕ್ಷ್ಮಣದಾಸ್ ಮಾತನಾಡಿ ಯುವ ಸಮೂಹ ಸ್ವೇಚ್ಛೆಯಾಗಿ ವರ್ತಿಸುತ್ತಿದೆ. ಇದಕ್ಕೆ ಕಾರಣ ನಮ್ಮ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿನ ಲೋಪಗಳು. ಮಾಧ್ಯಮಗಳ ಪ್ರಭಾವದಿಂದ ಯುವಸಮೂಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ನೈತಿಕ ಮೌಲ್ಯಗಳ ಪ್ರಜ್ಞೆಯನ್ನು ಯುವಕರಲ್ಲಿ ಮೂಡಿಸಬೇಕು ಎಂದರು. ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ. ಬಸವಯ್ಯ ಮಾತನಾಡಿ ಸ್ವಾತಂತ್ರ್ಯ ಯೋಧರ ಆಶೋತ್ತರಗಳ ಕೇಂದ್ರವಾದ ವೀರಸೌಧ ಇಂದು ಪಾಳು ಬಿದ್ದಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಚೌಕ ಅಭಿನಂದನಾ ಗ್ರಂಥದ ಸಂಪಾದಕ ಜಿ. ಇಂದ್ರಕುಮಾರ್, ಕಾರ್ಮಿಕ ಮುಖಂಡರಾದ ಎನ್. ಶಿವಣ್ಣ, ಎನ್.ಕೆ. ಸುಬ್ರಹ್ಮಣ್ಯ, ಗಿರೀಶ್, ಕಂಬೇಗೌಡ ಉಪಸ್ಥಿತರಿದ್ದರು. ಅಕ್ಕಮ್ಮ ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಭೂಮಿ ಬಳಗದ ಜಿ.ಎಸ್. ಸೋಮಣ್ಣ ಸ್ವಾಗತಿಸಿ ಕಂಬೇಗೌಡ ವಂದಿಸಿದರು.