ಹೇಮಾವತಿ ಯೋಜನೆ ಅನುಷ್ಠಾನಕ್ಕೆ ವರುಣನ ಕೃಪೆ ಅಗತ್ಯ: ಸುರೇಶ್ಗೌಡ
ಕ.ಪ್ರ. ವಾರ್ತೆ ತುಮಕೂರು ಜೂ.13
ಹೆಬ್ಬೂರು ಗೂಳೂರು ಹೇಮಾವತಿ ಕುಡಿಯುವ ನೀರಿನ ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ವರುಣ ದೇವ ಕೃಪೆ ತೋರಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ತಿಳಿಸಿದರು.
ಅವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೂಳೂರು ಹೋಬಳಿ ಮಸ್ಕಲ್ ಪಂಚಾಯ್ತಿ ವ್ಯಾಪ್ತಿಯ ಐತಿಹಾಸಿಕ ದೇವರಕೆರೆಯಲ್ಲಿ ನಡೆದ ವರುಣ ಯಾಗದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮೆಲ್ಲಾ ಕಾರ್ಯಗಳು ನಿತ್ಯ ಆರಂಭವಾಗುವುದೇ ನೀರಿನಿಂದ ಎಂದ ಅವರು ನೀರು ಅತ್ಯ ಅಮೂಲ್ಯ ಇದನ್ನು ಪ್ರತಿಯೊಬ್ಬ ನಾಗರೀಕರು ಕೂಡಾ ಅರ್ಥ ಮಾಡಿಕೊಳ್ಳಬೇಕು ಎಂದರು
ಪ್ರಸಕ್ತ ಸಾಲಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಜಲಾನಯನ ಇಲಾಖೆ ಅರಣ್ಯ ಇಲಾಖೆ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಮುಖೇನ ಅನುಷ್ಠಾನ ಗೊಳಿಸಲು ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದರು
ತಲತಲಾಂತರದಿಂದಲೂ ಕೂಡ ಪ್ರಸಿದ್ಧಿ ಪಡೆದಂತ ಕೆರೆ ಇದಾಗಿದೆ, ಶಿವಗಂಗೆ ತಪ್ಪಲಿನಲ್ಲಿರುವ ಈ ಕೆರೆಯನ್ನು ಚೋಳರಜೆರು ನಿರ್ಮಿಸಿರುವ ಕೆರೆ ಎಂಬುದಾಗಿ ದಾಖಲೆ ಇದ್ದು ಇಲ್ಲಿಗೆ ಸುತ್ತಮುತ್ತಲೂ ಮಾಗಡಿ, ನೆಲಮಂಗಲ ಕುಣಿಗಲ್ ಹಾಗೂ ತುಮಕೂರು ತಾಲೂಕಿನ ಗ್ರಾಮಸ್ಥರು ಆಯಾ ಊರಿನ ದೇವರುಗಳನ್ನು ತಂದು ಈ ಕೆರೆಯಲ್ಲಿ ಪುಣ್ಯ ಮಾಡಿಸಿಕೊಂಡು ಹೋಗುವುದು ವಾಡಿಕೆಯಾಗಿದೆ ಎಂದರು.
ದೈವ ಸೃಷ್ಟಿ: ಈ ಕೆರೆ ತುಂಬಿದರೆ ಶುಕ್ರವಾರ ಅಥವಾ ಮಂಗಳವಾರ ಮಾತ್ರ ಕೋಡಿ ಬೀಳುವುದು ಇತಿಹಾಸ ಮತ್ತು ದೈವ ಸೃಷ್ಟಿಯೇ ಸರಿ ಎಂದು ತಿಳಿಸಿದ ಶಾಸಕರು ಇಂತಹ ಇತಿಹಾಸ ಇರುವ ದೇವರಕೆರೆಯಲ್ಲಿ ಪೂರ್ವ ನಿಗದಿಯಂತೆ ವರುಣಯಾಗವನ್ನು ಹಮ್ಮಿಕೊಂಡಿರುವುದು ಈ ಭಾಗದ ರೈತಾಪಿ ವರ್ಗದ ಮುಖದಲ್ಲಿ ಮಂದಹಾಸ ಮತ್ತು ಇತಿಹಾಸ ನೆನಪಿಸುವ ಕಾರ್ಯಕ್ರಮ ಇದು ಎಂದು ತಿಳಿಸಿದರು.
ಗತಕಾಲದ ಇತಿಹಾಸವನ್ನು ನೋಡಿದಾಗ ದೇಶವು ಬರಗಾಲ ಪೀಡಿತವಾದಾಗ ಅಥವಾ ಮಳೆ ಇಲ್ಲದ ಸಮಯದಲ್ಲಿ ಯಘ್ನ ಯಾಗದಿಗಳನ್ನು ಮಾಡಿ ಮಳೆಯನ್ನು ಬರಿಸುತ್ತಿದ್ದರು ಎಂದು ಶಾಸಕ ಬಿ. ಸುರೇಶಗೌಡರು ತಿಳಿಸಿದರು. ತುಮಕೂರು ಗ್ರಾಮಾಂತರ ಮತ್ತು ಈ ನಾಡಿನ ಜನತೆ ಸುಭಿಕ್ಷೆಯಿಂದ ನೆಮ್ಮದಿಯಿಂದ ಜೀವನ ಮಾಡಬೇಕು ಎಂಬುದು ನನ್ನ ಮಹದಾಸೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು
ಈ ಕಾರ್ಯಕ್ರಮಕ್ಕೆ ತ್ರಿವಿಧ ದಾಸೋಹಿಗಳು ನಡೆದಾಡುವ ದೇವರು ಶಿವಕುಮಾರ ಮಹಾಸ್ವಾಮಿಗಳು, ಮಲಯ ಶಾಂತಮುನಿ ಮಹಾಸ್ವಾಮಿಗಳು, ಆನಂದ ದೇಶಿಕೇಂದ್ರ ಸ್ವಾಮಿಗಳು, ರುದ್ರಮುನಿ ಸ್ವಾಮಿಗಳು, ಜ್ಞಾನಾನಂದಪುರಿ ಸ್ವಾಮಿಗಳು ಈ ಮಹತ್ತರ ಕಾರ್ಯದಲ್ಲಿ ಭಾಗವಹಿಸಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.