ಎಂಎಲ್ಎ, ಎಂಪಿ ಅನುದಾನ ಬಿಡುಗಡೆಗೆ ಲಂಚ!
ಕನ್ನಡಪ್ರಭ ವಾರ್ತೆ, ತುಮಕೂರು, ಜೂ.15
ಎಂಎಲ್ಎ, ಎಂಪಿ ಅನುದಾನ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಲಂಚ ಕೇಳುತ್ತಿದ್ದಾರೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು, ಗುಬ್ಬಿ ಎಂಎಲ್ಎ ಎಸ್.ಆರ್. ಶ್ರೀನಿವಾಸ್ ಜಿಪಂ ಕೆಡಿಪಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಸಂಸದರ ಅನುದಾನದ ಖರ್ಚು - ವಿವರ ಕುರಿತಂತೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಗೆ ದೆಹಲಿಯಿಂದ ಕರೆ ಬರುತ್ತದೆ. ಆದರೆ ಇಲ್ಲಿನ ಅಧಿಕಾರಿ ಶಿವಣ್ಣ ಲಂಚ ನೀಡದೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ನೇರವಾಗಿ ದೂರಿದರು. ದೆಹಲಿಯಲ್ಲಿ ತಮ್ಮ ಮರ್ಯಾದೆ ಹರಾಜಾಗುತ್ತಿದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಗುಬ್ಬಿ ಎಂಎಲ್ಎ ಎಸ್.ಆರ್. ಶ್ರೀನಿವಾಸ್ ಸೇರಿದಂತೆ ಇತರರು ದನಿಗೂಡಿಸಿದರು. ಕೊನೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಸಹ ನನಗೂ ಈ ಅನುಭವ ಆಗಿದೆ. ಲಂಚ ಕೊಡದೆ ಫೈಲ್ ಮುಂದಕ್ಕೆ ಹೋಗಲ್ಲ ಅಂತ ಗೊತ್ತಿದೆ. ಡಿಸಿ ಯಾಮಾರಿಸಿ ಕೆಲಸ ಮಾಡುತ್ತಿದ್ದಾರೆ ಶಿವಣ್ಣ ಎಂದು ಅಧಿಕಾರಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಪೂರ್ವಭಾವಿ ಸಭೆ ಪ್ರಶ್ನಿಸದ ವಿರೋಧಿ ಶಾಸಕರು
ತುಮಕೂರು: ಜಿಪಂ ಕೆಡಿಪಿ ಸಭೆಗೂ ಮುನ್ನ ಜೂ.14 ರಂದು ಬೆಳಗಿನಿಂದ ಸಂಜೆವರೆಗೆ ಪೂರ್ವಭಾವಿ ಸಭೆ ಹೆಸರಿನಲ್ಲಿ ಕೆಡಿಪಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರ ನಡೆಯನ್ನು ವಿರೋಧಿ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಪ್ರಶ್ನಿಸದೇ ಇರುವುದು ಅಚ್ಚರಿಗೆ ಕಾರಣವಾಯಿತು. ಹಿಂದೆ ಯಾವಾಗಲೂ ಈ ರೀತಿಯ ಪೂರ್ವಭಾವಿ ಸಭೆ ನಡೆಸಿದ ಉದಾಹರಣೆಗಳಿಲ್ಲ. ಇದೊಂದು ರೀತಿಯ ಕಾನೂನು ಉಲ್ಲಂಘನೆ ಎಂಬುದು ಗೊತ್ತಿದ್ದರೂ ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಮೌನ ವಹಿಸಿದ್ದರು.
ಅಧಿಕೃತ ಕೆಡಿಪಿ ಸಭೆ ಯಾವುದು?
ತುಮಕೂರು: ಸತತ ಎರಡು ದಿನ ಅಂದರೆ ಜೂ. 14 ಹಾಗೂ 15 ರಂದು ಕೆಡಿಪಿ ಸಭೆ ನಡೆಸುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ವಿವಾದ ಹುಟ್ಟುಹಾಕಿದ್ದಾರೆ.
ಸರ್ಕಾರಿ ಆದೇಶದಂತೆ ವಾರ್ತಾ ಮತ್ತು ಪ್ರಚಾರ ಇಲಾಖೆ ನೀಡಿರುವ ಮಾಹಿತಿಯಂತೆ ಜೂ. 15 ರಂದು ಅಧಿಕೃತ ಕೆಡಿಪಿ ಸಭೆ. ಆದರೆ ಜೂ.14 ರಂದು ಸಹ ಪೂರ್ವಭಾವಿ ಹೆಸರಿನಲ್ಲಿ ಕೆಡಿಪಿ ಸಭೆ ನಡೆದಿದೆ. ಈ ಜೂ.14 ರ ಕೆಡಿಪಿ ಸಭೆಯ ಸುದ್ದಿಯನ್ನು ಸಹ ವಾರ್ತಾ ಮತ್ತು ಪ್ರಚಾರ ಇಲಾಖೆ ಪ್ರಕಟಿಸಿದೆ. ಹೀಗಾಗಿ ಅಧಿಕೃತ ಕೆಡಿಪಿ ಸಭೆ ಜೂ. 14 ರದ್ದೋ ಅಥವಾ 15 ರದ್ದೋ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟಪಡಿಸಬೇಕಿದೆ. ಜತೆಗೆ ಕಾನೂನು ಸಚಿವರಾಗಿ ಕಾನೂನು ಉಲ್ಲಂಘಿಸಿದ್ದಾರೋ ಇಲ್ಲವೋ ಎಂಬುದನ್ನು ಸಹ ಸ್ಪಷ್ಟಪಡಿಸಬೇಕಿದೆ.