ಪರೀಕ್ಷಿಸಿ ರಸಗೊಬ್ಬರ ತೆಗೆದುಕೊಳ್ಳಿ: ಚಾಮರಾಜಪ್ಪ
ಗುಬ್ಬಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಬೆಳೆಗಳಿಗೆ ಬಳಸಲು ರೈತರು ರಸಗೊಬ್ಬರಗಳನ್ನು ಪರೀಕ್ಷಿಸಿ ತೆಗೆದುಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಚಾಮರಾಜಪ್ಪ ರೈತರಿಗೆ ಕರೆ ನೀಡಿದರು.
ಗುಬ್ಬಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ 2013-14 ಸಾಲಿನ ಹಂಗಾಮಿನಲ್ಲಿ ಖಾಸಗಿ ರಸಗೊಬ್ಬರ ಮಾರಾಟಗಾರರು ಹಾಗೂ ಸಹಾಯಕ ಸಂಘಗಳ ಕಾರ್ಯದರ್ಶಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಖಾಸಗಿ ರಸಗೊಬ್ಬರ ಮಾರಾಟಗಾರರು ಈಗಾಗಲೇ ಸರ್ಕಾರ ನಿಗದಿಗೊಳಿಸಿರುವ ದರದಲ್ಲಿಯೇ ಗೊಬ್ಬರಗಳನ್ನು ವಿತರಿಸುವುದು ಹಾಗೂ ಗೊಬ್ಬರದ ನಿಗದಿತ ದರವನ್ನು ಅಂಗಡಿಗಳ ಮುಂದಿನ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ. ಕಳಪೆ ರಸಗೊಬ್ಬರ ಮಾರಾಟ ಮಾಡುವುದಾಗಲಿ ಅಥವಾ ದಾಸ್ತಾನು ಮಾಡುವುದಾಗಲೀ ಕಂಡುಬಂದಲ್ಲಿ ನಿಯಮಾನುಸಾರ ಗೊಬ್ಬರದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ತಹಸಿಲ್ದಾರ್ ಸಿದ್ದಪ್ಪ ಮಾತನಾಡಿ ಈಗಾಗಲೇ ತಾಲೂಕಿನ ಎಲ್ಲಾ ಪರವಾನಗಿ ಪಡೆದ ಖಾಸಗಿ ಮತ್ತು ಸಹಕಾರ ಸಂಘಗಳ ರಸಗೊಬ್ಬರ ಮಾರಾಟಗಾರರಿಗೆ ಸರ್ಕಾರ ನಿಗದಿಪಡಿಸಿರುವ ದರದಲ್ಲಿಯೇ ಗೊಬ್ಬರಗಳನ್ನು ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ ಪ್ರತಿಗೊಬ್ಬರದ ನಿಗದಿತ ದರವನ್ನು ಆಯಾ ಅಂಗಡಿಗಳ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಹಾಕಬೇಕು ಎಂದರು.