ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರು. 5 ಕೋಟಿ ಮೌಲ್ಯದ ಮೋಟಾರ್ ಲೆಕ್ಕ ಸಿಇಓ ಬಳಿಯಿಲ್ಲ

Rashmi Kasaragodu
Updated On : 16 Jun 2013, 12:46 pm

ಕ.ಪ್ರ.ವಾರ್ತೆ, ತುಮಕೂರು, ಜೂ.15
ಜಿಲ್ಲೆಯ ಸುಮಾರು 500 ಸುಸ್ಥಿತಿಯಲ್ಲಿರುವ ಹಳೇ ಬೋರ್ವೆಲ್ಗಳ 5 ಕೋಟಿ ರು. ಮೌಲ್ಯದ ಮೋಟಾರ್, ಪೈಪ್, ಸ್ಟಾರ್ಟರ್ಗಳ ಲೆಕ್ಕ ತುಮಕೂರು ಜಿಪಂ ಸಿಇಓ ಬಳಿಯಿಲ್ಲ ಎಂಬ ವಿಷಯ ಜಿಪಂ ಕೆಡಿಪಿ ಸಭೆಯಲ್ಲಿ ಗೋಚರಿಸಿತು.
ಕಾಂಗ್ರೆಸ್ ಸರ್ಕಾರ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರರ ನೇತೃತ್ವದಲ್ಲಿ ಏರ್ಪಾಟಾಗಿದ್ದ ಮೊದಲ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮೇಲಿನ ವಿಷಯ ಬೆಳಕಿಗೆ ಬಂತು.
ಜಿಲ್ಲಾ ಪಂಚಾಯತ್ಗೆ ಹೊಸ ಬೋರ್ವೆಲ್ಗಳನ್ನು ಕೊರೆಸುವುದಷ್ಟೇ ಗೊತ್ತು. ಹೊಸ - ಹೊಸ ಮೋಟಾರ್, ಪೈಪ್, ಸ್ಟಾರ್ಟರ್ಗಳನ್ನು ಖರೀದಿಸುವದಷ್ಟೇ ಗೊತ್ತು. ಆದರೆ ಸುಸ್ಥಿತಿಯಲ್ಲಿರುವ ಹಳೇ ಮೋಟಾರ್, ಪೈಪ್, ಸ್ಟಾರ್ಟರ್ಗಳ ಲೆಕ್ಕ ಇಡುವುದು ಗೊತ್ತಿಲ್ಲ. ಕೊರೆಸಿದ ಹೊಸ ಬೋರ್ವೆಲ್ಗಳಿಗೆ ಹಳೇ ಬೋರ್ವೆಲ್ಗಳ ಸುಸ್ಥಿತಿಯಲ್ಲಿರುವ ಬಿಡಿ ಭಾಗಗಳನ್ನು, ಯಂತ್ರೋಪಕರಣಗಳನ್ನು ಅಳವಡಿಸುವುದು ಗೊತ್ತಿಲ್ಲ ಎಂಬ ವಿಷಯ ಜಿಲ್ಲೆಯ ಎಲ್ಲ ಶಾಸಕರ ಎದುರು ಅನಾವರಣಗೊಂಡಿತು.
ಸಭೆ ಆರಂಭವಾಗುತ್ತಿದ್ದಂತೆಯೇ ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಜಿಪಂ ಸಿಇಓಗೆ ಸುಸ್ಥಿತಿಯಲ್ಲಿರುವ ಹಳೇ, ಮೋಟಾರ್, ಪೈಪ್ಗಳ ಲೆಕ್ಕ ಕೇಳಿದರು. ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಈವರೆವಿಗಿನ ಅಂದರೆ ಜೂನ್ವರೆಗಿನ ಹಳೇ ಬೋರ್ವೆಲ್ಗಳ ಅಂದಾಜು 5 ಕೋಟಿ ರು. ಮೌಲ್ಯದ 500 ಕ್ಕೂ ಹೆಚ್ಚು ಸುಸ್ಥಿತಿಯಲ್ಲಿರುವ ಹಳೇ ಬೋರ್ವೆಲ್ಗಳ ಬಿಡಿ ಭಾಗಗಳು, ಯಂತ್ರೋಪಕರಣಗಳ ಕುರಿತು ಜಿಪಂ ಸಿಇಓ ಗೋವಿಂದರಾಜು ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು. ಈ ಮಧ್ಯೆ ಜಿಲ್ಲೆಯ ಬಹುತೇಕ ಎಲ್ಲ ಶಾಸಕರು ಅವರವರ ತಾಲೂಕುಗಳ ಕುಡಿಯುವ ನೀರಿನ, ಮತ್ತಿತರೆ ಪ್ರಶ್ನೆಗಳನ್ನು ಎತ್ತತ್ತಲೇ ಹೋದರು.
4 ಬಾರಿ ಪ್ರಶ್ನೆ: ಈ ಮಧ್ಯೆ ಕೆ.ಎನ್. ರಾಜಣ್ಣ ಕೇಳಿದ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅವರಾಗಲೀ ಅಥವಾ ಜಿಪಂ ಸಿಇಓ ಆಗಲೀ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಪಟ್ಟು ಬಿಡದ ರಾಜಣ್ಣ ಕೇಳಿದ ಪ್ರಶ್ನೆಯನ್ನೇ 4 ಬಾರಿ ಕೇಳಬೇಕಾಯಿತು. ಸುಮಾರು 12 ಗಂಟೆಗೆ ಕೇಳಿದ ಪ್ರಶ್ನೆಗೆ 1-30 ರ ವೇಳೆಗೆ ಉತ್ತರ ದೊರೆಯಿತು. ಅದೂ ನಿರಾಶಾದಾಯಕ ಉತ್ತರ. ತಮ್ಮ ಬಳಿ ಹಳೇ ಮೋಟಾರ್, ಪೈಪ್ಗಳ ಮಾಹಿತಿಯಿಲ್ಲ. ತಾಲೂಕುವಾರು ಪಂಚಾಯತ್ ವ್ಯಾಪ್ತಿಯಲ್ಲಿನ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಮುಂದಿನ ಕೆಡಿಪಿ ಸಭೆಯಲ್ಲಿ ಉತ್ತರ ಹೇಳುವುದಾಗಿ ಭರವಸೆ ನೀಡಿದರು. ಅಲ್ಲಿಗೆ ವಿಷಯ ಮುಕ್ತಾಯವಾಯಿತು. ಉಡದ ಪಟ್ಟಿನ  ಕೆ.ಎನ್. ರಾಜಣ್ಣನವರ 5 ಕೋಟಿ ರು. ಮೌಲ್ಯದ ಪ್ರಶ್ನೆಗೆ ಮುಂದಿನ ತ್ರೈಮಾಸಿಕ ಜಿಪಂ ಕೆಡಿಪಿ ಸಭೆಯಲ್ಲಿ ಉತ್ತರ ದೊರಕುವುದೇ ಎಂಬುದನ್ನು ಕಾದು ನೋಡಬೇಕಿದೆ.
ಪಾಚಿ ಕಟ್ಟಿದ ನೀರು, ಎಂದಿನಂತೆ ಸಬೂಬು: ಸಭೆ ಆರಂಭವಾಗುತ್ತಿದ್ದಂತೆಯೇ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ಬಾಬು ಮಾತನಾಡಿ, ತಮ್ಮ ಕ್ಷೇತ್ರದ ಹುಳಿಯಾರು ಹೋಬಳಿಯಲ್ಲಿ ಪಾಚಿ ಕಟ್ಟಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ನೀರನ್ನು ಕುಡಿದರೆ ಎಲ್ಲ ರೀತಿಯ  ಸಾಂಕ್ರಾಮಿಕ ರೋಗಗಳು ಬರುತ್ತವೆ ಎಂದು ತಾವು ಬಾಟಲಿಯಲ್ಲಿ ತಂದಿದ್ದ ಪಾಚಿ ಕಟ್ಟಿದ ನೀರನ್ನು ಸಚಿವ ಜಯಚಂದ್ರರಿಗೆ ನೀಡಿದರು.
ಹಿಂದಿನ ಸರ್ಕಾರದ ಸಚಿವರಂತೆಯೇ, ಸಚಿವ ಜಯಚಂದ್ರ ಯಾರ್ರೀ ಅಲ್ಲಿ, ಎಇಇ, ಇಓ ಎಂದು ಕರೆದರು. ನಿಮಗೆ ಜವಾಬ್ದಾರಿಯಿಲ್ಲವೆ, ನೀವು ಆ ನೀರನ್ನು ಕುಡಿಯುತ್ತೀರಾ, ಕುಡಿಯಿರಿ ನೋಡೋಣ ಎಂದು ತರಾಟೆಗೆ  ತೆಗೆದುಕೊಂಡರು. ಅಧಿಕಾರಿಗಳು ಎಂದಿನಂತೆ ಸಬೂಬು ಹೇಳಿದರು. ಅಲ್ಲಿಗೆ ವಿಷಯ ಮುಕ್ತಾಯವಾಯಿತು.
ಕಾಂಗ್ರೆಸ್ ಸರ್ಕಾರ ಬಂದ ನಂತರ ಏರ್ಪಾಟಾಗಿದ್ದ ಜಿಪಂ ಕೆಡಿಪಿ ಪ್ರಥಮ ಸಭೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಪಾಲ್ಗೊಂಡಿದ್ದರು. ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement