ರೈತನ ಮೇಲೆ ಕರಡಿ ದಾಳಿ: ತೀವ್ರ ಗಾಯ
ಪಾವಗಡ: ರಸ್ತೆ ಮೂಲಕ ತೋಟಕ್ಕೆ ಹೋಗುತ್ತಿದ್ದ ರೈತರೊಬ್ಬರ ಮೇಲೆ ದಾಳಿ ನಡೆಸಿದ ಕರಡಿಯೊಂದು ಆತನ ಮೇಲೆ ತೀವ್ರ ಗಾಯಗೊಳಿಸಿದ ಘಟನೆ ಶನಿವಾರ ಬೆಳಿಗ್ಗೆ ಮುಗದಾಳಬೆಟ್ಟ ಗ್ರಾಮದಲ್ಲಿ ನಡೆದಿದೆ.
ಕರಡಿ ದಾಳಿಯಿಂದ ಗಾಯಗೊಳಗಾದ ವ್ಯಕ್ತಿ ಮಾರಪ್ಪ (58) ಎಂಬುವರು.
ಮುಗದಾಳಬೆಟ್ಟ ಗ್ರಾಮದ ರೈತ ಮಾರಪ್ಪ ಪ್ರತಿ ದಿನ ಬೆಳಿಗ್ಗೆ ತಮ್ಮ ತೋಟಕ್ಕೆ ಹೋಗಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದ. ಎಂದಿನಂತೆ ಮಾರಪ್ಪ ಶನಿವಾರ ಮುಂಜಾನೆ ರಸ್ತೆ ಮೂಲಕ ತಮ್ಮ ತೋಟಕ್ಕೆ ಹೋಗುವಾಗ ರಸ್ತೆ ಪಕ್ಕದಲ್ಲಿದ್ದ ದೊಡ್ಡಬೆಟ್ಟವೊಂದರ ಗಿಡಮರಗಳ ಮಧ್ಯೆ ಅಡಗಿದ್ದ ಕರಡಿ ಆತನ ಮೇಲೆ ದಾಳಿ ನಡೆಸಿದೆ. ಕರಡಿ ದಾಳಿಯಿಂದ ಮಾರಪ್ಪ ಕಿರುಚಾಡಿದಾಗ ಸುತ್ತಮುತ್ತಲಿನ ಸಾರ್ವಜನಿಕರು ಆಗಮಿಸಿದಾಗ ಕರಡಿ ಅಲ್ಲಿಂದ ಪರಾರಿಯಾಗಿದೆ.
ಕೂಡಲೇ ತುರ್ತು ವಾಹನಕ್ಕೆ ಕರೆ ಮಾಡಿ ಗಾಯಗೊಂಡ ಮಾರಪ್ಪನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಮಾರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.