ತೆಂಗು ಬೆಳೆಗಾರರ ಸಾಲ ಮನ್ನಾಕ್ಕೆ ಒತ್ತಾಯ
ತಿಪಟೂರು: ತಾಲೂಕಿನ ಪ್ರಮುಖ ಜೀವನಾಡಿ ವಾಣಿಜ್ಯ ಬೆಳೆಯಾದ ತೆಂಗು ಕಳೆದ ಹತ್ತಾರು ವರ್ಷಗಳಿಂದ ತೀವ್ರ ನಷ್ಟಕ್ಕೊಳಗಾಗಿದ್ದು, ತೆಂಗು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ತೆಂಗು ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಎಪಿಎಂಸಿ ನಿರ್ದೇಶಕ ಬಿ.ಬಿ. ಸಿದ್ದಲಿಂಗಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತೆಂಗು ಬೆಳೆಗಾರರಿಗೆ ಮೂಲ ಸೌಲಭ್ಯಗಳ ಕೊರತೆ, ಪ್ರಕೃತಿ ವಿಕೋಪ, ತೆಂಗಿನ ಮರಕ್ಕೆ ತೀವ್ರವಾಗಿ ಕಾಡುತ್ತಿರುವ ನುಸಿ, ಕಪ್ಪುತಲೆ ಹುಳುರೋಗ, ರಸಸೋರಿಕೆ ಇತ್ಯಾದಿ ರೋಗಗಳು ತೆಂಗು ಬೆಳೆವ ರೈತರನ್ನು ಕಂಗಾಲಾಗುವಂತೆ ಮಾಡಿವೆ. ರೈತರು ತೋಟಗಳ ಅಭಿವೃದ್ಧಿಗೆ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆದಿದ್ದು, ಅದರ ಬಡ್ಡಿ ಕಟ್ಟಲೂ ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿಯಾಗಲಿ, ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆಯಾಗಲಿ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳಾಗಲಿ ಯೋಜನೆಗಳ ಜಾರಿಯಲ್ಲಿ ಬರಿ ಅಂಕಿ-ಅಂಶಗಳ ಗುರಿ ತಲುಪುವ ಮಾರ್ಗ ಹಿಡಿಯುತ್ತಿವೆಯೇ ಹೊರತು ತೆಂಗು ಬೆಳೆಗಾರರಿಗೆ ಸೂಕ್ತ ಮಾರ್ಗ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಸಿದ್ದಲಿಂಗಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಂಗಿಗೆ ಸರಿಯಾದ ಮಳೆ ಹಾಗೂ ಗೊಬ್ಬರವು ಇಲ್ಲದೆ, ಕೊಬ್ಬರಿ ತೂಕವೂ ಸಹ ಕಡಿಮೆಯಾಗುತ್ತಿರುವುದಲ್ಲದೆ ಅರ್ಧದಷ್ಟು ತೆಂಗು ಕಡಿಮೆಯಾಗುತ್ತಿರುವುದು ದುರದೃಷ್ಟಕರ ಸಂಗತಿ. ಕೊಬ್ಬರಿಗೆ ವೈಜ್ಞಾನಿಕ ಬೆಲೆಯೂ ಸಹ ಸಿಗುತ್ತಿಲ್ಲ. ಸಾಲಕ್ಕೆ ಬಡ್ಡಿ ಕಟ್ಟಲಾಗದೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ದಿನನಿತ್ಯ ವ್ಯವಹಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಪಿ.ಎಲ್.ಡಿ., ವಾಣಿಜ್ಯ ಹಾಗೂ ಸಹಕಾರ ಬ್ಯಾಂಕ್ಗಳು ತೆಂಗು ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಸಿದ್ದಲಿಂಗಮೂರ್ತಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಂದು ಮರಳು ಬಹಿರಂಗ ಹರಾಜು
ಕುಣಿಗಲ್: ತಾಲೂಕಿನ ಶಿಂಷಾ ನದಿಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಚಟುವಟಿಕೆ ಹಿನ್ನೆಲೆಯಲ್ಲಿ ಕೊಡವತ್ತಿ, ತೊರೆಬೊಮ್ಮನಹಳ್ಳಿ ಹಾಗೂ ಹನುಮಂತನಗರದಲ್ಲಿ ವಶಪಡಿಸಿಕೊಳ್ಳಲಾಗಿರುವ ಮರಳನ್ನು, ಸರ್ಕಾರದ ನೂತನ ಮರಳು ನೀತಿ ಅನ್ವಯ, ಜಿಲ್ಲಾಧಿಕಾರಿಗಳು ನಿಗದಿಪಡಿಸಿರುವಂತೆ ಕ್ಯುಬಿಕ್ ಮೀಟರ್ ಒಂದಕ್ಕೆ 815 ರು.ನಂತೆ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಇದೇ 17ರ ಸೋಮವಾರ ಹಮ್ಮಿಕೊಳ್ಳಲಾಗಿದೆ. ಆಸಕ್ತ ಮರಳು ಖರೀದಿದಾರರು, ತಾವು ಖರೀದಿಸುವ ಮರಳಿನ ಪ್ರಮಾಣಕ್ಕೆ ಅನುಗುಣದ ಒಟ್ಟಾರೆ ಮೊತ್ತಕ್ಕೆ, ಇಇ, ಪಿಡಬ್ಲ್ಯುಡಿ, ತುಮಕೂರು ಇವರ ಹೆಸರಲ್ಲಿ ಡಿಡಿ ಪಡೆದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದೆಂದು ಕುಣಿಗಲ್ ಎಇಇ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.