ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಕ್ತದಾನ ಮಾನವೀಯತೆ ಮೆರೆಯುವ ಶ್ರೇಷ್ಠ ದಾನ

Rashmi Kasaragodu
Updated On : 16 Jun 2013, 10:55 am

ತುಮಕೂರು: ರಾಷ್ಟ್ರೀಯ ರಕ್ತದಾನ ದಿನದ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ರಕ್ತದಾನ ಮಾಡಿ ವಿಶೇಷ ದಿನವನ್ನು ಸ್ಮರಣೀಯವಾಗಿಸಿದರು.
ಜಿಲ್ಲಾ ಆಸ್ಪತ್ರೆ ಹಾಗೂ 108 ತುರ್ತು ಸೇವೆಗಳ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಶಸ್ತ್ರ ಚಿಕಿತ್ಸಕಿ ಡಾ. ಎಂ. ರಜನಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ರಕ್ತದಾನ ಸಂಬಂಧಗಳನ್ನು ಬೆಸೆಯುವ, ಮಾನವೀಯತೆ ಮೆರೆಯುವ ಶ್ರೇಷ್ಠ ದಾನ. ಪ್ರತಿಯೊಬ್ಬರೂ ಪವಿತ್ರ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ತಮ್ಮ ಹುಟ್ಟು ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿನಂತಿಸಿದರು.  ಹೆರಿಗೆ, ಅಪಘಾತ ಅಥವಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ದಾನಿಗಳು ನೀಡುವ ರಕ್ತವೇ ಅವರ ಜೀವ ಉಳಿಸಲು ನೆರವಾಗುತ್ತದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದೆ ಮತ್ತೊಬ್ಬರೇ ದಾನ ನೀಡಬೇಕಾಗಿರುವ ಕಾರಣ ರಕ್ತದಾನಕ್ಕೆ ಮಹತ್ವ ಬಂದಿದೆ ಎಂದರು. 28 ಬಾರಿ ರಕ್ತದಾನ ಮಾಡಿರುವ ದಂತ ವೈದ್ಯ ಡಾ. ಸಂಜಯ್ ನಾಯಕ್ ಅವರನ್ನು ಈ ಸಂದರ್ಭದಲ್ಲಿ ಡಾ. ರಜನಿ ಸನ್ಮಾನಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ರಜನಿ ಸೇರಿದಂತೆ ಆಸ್ಪತ್ರೆಯ ಬಹುತೇಕ ವೈದ್ಯರು, ಸಿಬ್ಬಂದಿಗಳು ರಕ್ತದಾನ ಮಾಡಿದರು. ಡಾ. ರುದ್ರಮೂರ್ತಿ, ಡಾ. ವೆಂಕಟೇಶ್, ಡಾ. ಅರುಣ್, ಡಾ. ವೀಣಾ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement