ಸಮಗ್ರ ಅಭಿವೃದ್ಧಿಗೆ ಶ್ರಮ
ತುಮಕೂರು: ಪಕ್ಷದ ಗೆಲವಿಗೆ ಪ್ರಮುಖ ಪಾತ್ರವಹಿಸಿರುವ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಲು ನಾವು ಬದ್ಧವಾಗಿರುತ್ತವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲಾ ಶಾಸಕರು ಒಟ್ಟಿಗೆ ಶ್ರಮಿಸುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ನೀಡಿದರು.
ನಗರದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಕಾನೂನು ಮತ್ತು ಕಾನೂನು ಘಟಕ ಆಯೋಜಿಸಿದ್ದ ಕಾಂಗ್ರೆಸ್ ಬೆಂಬಲಿಸಿದ ಕಾರ್ಯಕರ್ತರು ಹಾಗೂ ಜಿಲ್ಲೆಯ ನೂತನ ಶಾಸಕರಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಂತರ ಮಾತನಾಡಿದ ತಿಪಟೂರು ಶಾಸಕ ಕೆ.ಷಡಕ್ಷರಿ, ರಾಜಕಾರಣವೇ ಬೇಡ ಎಂದು ಮನೆಯಲ್ಲಿ ಕುಳಿತಿದ್ದ ನನಗೆ ಧೈರ್ಯ ತುಂಬಿದವರು ಕ್ಷೇತ್ರದ ಮುಸ್ಲೀಂ ಬಾಂಧವರು. ಜನರ ವಿಶ್ವಾಸಗಳಿಸಿ ಆಯ್ಕೆಯಾದ ನನಗೆ ಕ್ಷೇತ್ರದ ಜನರು ಅಭಿನಂದನೆ ಸಲ್ಲಿಸುತ್ತೇವೆ ಎಂದಾಗ ನಿರಾಕರಿಸಿದ್ದೆ. ಆದರೆ, ಇದು ಮತದಾರರಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮವಾದ್ದರಿಂದ ಒಪ್ಪಿಕೊಂಡು ಆಗಮಿಸಿದ್ದೇನೆ ಎಂದರು.
ಯೋಚಿಸಿ ಮತದಾನ: ಈ ಬಾರಿಯ ಚುನಾವಣೆಯಲ್ಲಿ ಜನ ಯೋಚಿಸಿ ಮತದಾನ ನೀಡಿದ್ದಾರೆ. ಈಗ ಪ್ರಾಮಾಣಿಕರಿಗೆ ಕಾಲ ಬಂದಿದೆ. ಜನರಿಗೆ ಉತ್ತಮ ಆಡಳಿತ ನೀಡುವ ಮೂಲಕ ಜನರ ಋಣ ತೀರಿಸುವ ಜವಾಬ್ದಾರಿ ಇದೆ. ಹಾಗೆಯೇ ಬಹುತೇಕ ನವೆಂಬರ್ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು ಕಾರ್ಯಕರ್ತರು ವಿಜಯೋತ್ಸವವನ್ನು ಅಲ್ಲಿಯೂ ಮುಂದುವರೆಸಲು ಶ್ರಮಿಸಬೇಕು ಎಂದರು.
ಪ್ರಮಾಣಿಕ ಸೇವೆ: ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಅಲ್ಪಸಂಖ್ಯಾತನಾದ ನನ್ನನ್ನು ಆಯ್ಕೆ ಮಾಡಿದ ಜನರ ವಿಶ್ವಾಸಕ್ಕೆ ನಾನು ಋಣಿ. ಕೇವಲ ಅಲ್ಪಸಂಖ್ಯಾತ ಮತಗಳಿಂದ ನಾನು ಆಯ್ಕೆಯಾಗಿಲ್ಲ. ಸಮಾಜದ ಎಲ್ಲಾ ವರ್ಗದ ಮತದಾರರ ಬೆಂಬಲದಿಂದ ಶಾಸಕನಾಗಿ ಆಯ್ಕೆಯಾಗಿದ್ದು ಅವರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ನಿಷ್ಠಾವಂತ ಕಾರ್ಯಕರ್ತ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಒಂದೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುವ ಅಧಿಕಾರಿಗಳ ಜಾಯಮಾನ ನನ್ನದಲ್ಲ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ವಿಧಾನಸಭೆ ಚುನಾವಣೆ ರಾಜ್ಯಾದ್ಯಂತ ಪ್ರವಾಸ ನಡೆಸಿ ಪ್ರಚಾರ ಮಾಡಿದ್ದೇನೆ. ಪಕ್ಷ ನೀಡುವ ಜವಾಬ್ಧಾರಿಯನ್ನು ಪಾಲಿಸುವುದು ನನ್ನ ಕರ್ತವ್ಯ ಎಂದು ತಿಳಿದಿದ್ದೇನೆ ಎಂದರು. ಸಚಿವ ಟಿ.ಬಿ.ಜಯಚಂದ್ರ, ಶಾಸಕರಾದ ಕೆ.ಷಡಕ್ಷರಿ, ಡಾ.ರಫೀಕ್ ಅಹಮದ್ ಅವರನ್ನು ಕಾರ್ಯಕರ್ತರು ಸನ್ಮಾನಿಸಿದರು.ಸಮಾರಂಭದಲ್ಲಿ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಗೈರುಹಾಜರಿ ಎದ್ದು ಕಾಣುತ್ತಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿಅಹಮದ್, ವಿಜಯ್ಪ್ರಕಾಶ್ ಮಿರ್ಜಿ, ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.