ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘ
ಕ.ಪ್ರ.ವಾರ್ತ್ಣೆ ಕುಣಿಗಲ್ ಜೂ. 16
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ಅತ್ಯವಶ್ಯಕ ಲೇಖನ ಸಾಮಗ್ರಿ ಸೇರಿದಂತೆ ಇತರೆ ಅವಶ್ಯಕ ಸಾಮಗ್ರಿಗಳನ್ನು ಪೂರೈಸಿ ಅವರ ಕಲಿಕಾ ಗುಣಮಟ್ಟವನ್ನು ಪರಿಣಾಮಕಾರಿಯಾಗಿ ವೃದ್ಧಿಸುವ ಹೊಸ ಪರಿಕಲ್ಪನೆಯೊಂದಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘ ತಾಲೂಕಿನಲ್ಲಿ ಮೊದಲ ಬಾರಿಗೆ ಕಲ್ಲುಪಾಳ್ಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಸ್ತಿತ್ವಕ್ಕೆ ಬಂದಿತು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಶಿಕ್ಷಣ, ಪಠ್ಯ ಪುಸ್ತಕ ವಿತರಿಸುತ್ತಿದ್ದು, ಉಳಿದಂತೆ ಮೂಲಭೂತ ಸೌಕರ್ಯ ವೃದ್ಧಿಸಿ, ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ, ಬ್ಯಾಗ್ ಸೇರಿದಂತೆ ಇತರೆ ಪೂರಕ ಮಾಹಿತಿಯ ಅವಶ್ಯಕ ಸಾಮಗ್ರಿಗಳನ್ನು ಪೂರೈಸಲು, ಆಯಾ ಶಾಲೆಗಳ ವ್ಯಾಪ್ತಿಯ ಸಮಾನಮನಸ್ಕ ದಾನಿಗಳ ನೆರವನ್ನು ಪಡೆದು, ಶಾಲಾ ಮಕ್ಕಳಿಗೆ ವಿತರಿಸಿ ಅವರ ಕಲಿಕಾ ಸಾಮರ್ಥ್ಯ ವೃದ್ಧಿಸಲು ಕಲ್ಲುಪಾಳ್ಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾದ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ವೀರಣ್ಣ, ಮುಖ್ಯ ಶಿಕ್ಷಕಿ ನಾಗರಾತ್ನಮ್ಮ ವೃಂದಕ್ಕೆ ಹೊಸ ಪರಿಕಲ್ಪನೆ ಮೂಡಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇತ್ತೀಚೆಗೆ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.
ಶೈಕ್ಷಣಿಕ ಪ್ರಗತಿ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಯಟ್ನ ಪ್ರಾಂಶುಪಾಲ ಈಶ್ವರಯ್ಯ, ಶಿಕ್ಷಕರು ಸದಾ ಅಧ್ಯಯನ ಶೀಲರಾಗಿ, ಹೊಸ, ಹೊಸ ಶಿಕ್ಷಣ ಪದ್ಧತಿಗಳನ್ನು ಇಂದಿನ ಮಕ್ಕಳಿಗೆ ಸರಳವಾಗಿ ಅರಿವಾಗುವ ದಿಸೆಯಲ್ಲಿ ಬೋಧನೆಗೆ ಕ್ರಮ ಕೈಗೊಂಡಾಗ ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮವಾಗುತ್ತದೆ. ಶಾಲೆಗಳೆಂದರೆ ಮಕ್ಕಳು ಇಷ್ಟಪಟ್ಟು ಬರುವಂತ ವಾತಾವರಣ ನಿರ್ಮಾಣವಾಗಿ ಸ್ನೇಹಮಯ ವಾತಾವರಣ ಉಂಟಾಗಬೇಕೆ ಹೊರತು, ಕಷ್ಟಪಟ್ಟು ಬರುವಂತಾಗುವ ವಾತಾವರಣ ನಿರ್ಮಾಣ ವಾಗಬಾರದು, ಶಾಲೆಯ ಶಿಕ್ಷಕ ವೃಂದದ ಪರಿಶ್ರಮದಿಂದ ಶಾಲಾ ವಾತಾವರಣ ಹಸಿರಾಗುವ ಮೂಲಕ, ಶಾಲೆಯಲ್ಲಿ ಕಲಿಯುವ ಗ್ರಾಮಾಂತರ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಯೋಜನೆ ಶ್ಲಾಘನೀಯ ಎಂದರು.