'ಕಳಪೆ ಕಾಮಗಾರಿಗೆ ಎಂಜಿನಿಯರ್ ಕಾರಣ'
ತಿಪಟೂರು: ತಾಲೂಕಿನ ಕಳಪೆ ಕಾಮಗಾರಿಗಳು ಹೆಚ್ಚಾಗಿದ್ದು, ಇದಕೆಲ್ಲಾ ವಿವಿಧ ಇಲಾಖೆಗಳ ಸಹಾಯಕ ಎಂಜಿನಿಯರ್ ಅವರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸದೆ ಗುತ್ತಿಗೆದಾರರಿಗೆ ಶಾಮೀಲಾಗಿ ಅಧಿಕಾರಿಗಳು ಕುಳಿತಲ್ಲಿಯೇ ಬಿಲ್ ಮಾಡುತ್ತಿದ್ದಾರೆಂದು ತಾ.ಪಂ. ಅಧ್ಯಕ್ಷ ಭಾನುಪ್ರಕಾಶ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು
ತಾಲೂಕಿನ ಶೆಟ್ಟಿಹಳ್ಳಿಯಲ್ಲಿ 16 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಓವರ್ ಹೆಡ್ ಟ್ಯಾಂಕ್ ಕಳಪೆ ಕಾಮಗಾರಿಯಿಂದ ಕೂಡಿದ್ದು, ಈ ಬಗ್ಗೆ ಪರಿಶೀಲಿಸದೆ ಕಚೇರಿಯಲ್ಲಿ ಕುಳಿತು ಬಿಲ್ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ತಾಲೂಕಿನ ಎಲ್ಲಾ ಗ್ರಾ.ಪಂ.ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ತಾಕೀತು ಮಾಡಿದರು.
ಹಣ ವಸೂಲಿ: ಗಂಗಾಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೈತರಿಂದ ಗುತ್ತಿಗೆದಾರರು ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬೆಸ್ಕಾಂ ಎಂಜಿನಿಯರಿಂಗ್ಗೆ ಸೂಚಿಸಿದರು. ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಲಸಿಕೆ ಹಾಕಬೇಕು. ರೈತರಿಗೆ ಮೇವಿನ ಬೀಜವನ್ನು ನೀಡುವ ಮೂಲಕ ಗೋವುಗಳನ್ನು ರಕ್ಷಣೆ ಮಾಡಬೇಕೆಂದು ಅಧ್ಯಕ್ಷರು ಪಶು ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಅರಣ್ಯಾಧಿಕಾರಿಗಳು ಅರಣ್ಯ ಸಂರಕ್ಷಿಸುವತ್ತ ಆದ್ಯತೆ ನೀಡಬೇಕು. ಹಾಲ್ಕುರಿಕೆ ಬಳಿ ಮರಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಬೇಕೆಂದರು. ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು ಹೊಂಗೆ, ಹಲಸು, ಸೀತಾಫಲ, ಸರ್ವೆ, ತೇಗು ಮುಂತಾದ 67 ಸಾವಿರ ಸಸಿಗಳನ್ನು ವಿತರಿಸಲು ಸಿದ್ಧರಿದ್ದು, ಒಂದು ಸಸಿಗೆ ಒಂದು ರು. ಬೆಲೆಯಲ್ಲಿ ನೀಡಲಾಗುವುದು ಎಂದರು.